ಶೀಲದ ಮೇಲೆ ಶಂಕೆ: ಮನೆಗೆ 3 ಬೀಗ ಹಾಕಿ ಪತ್ನಿಯನ್ನು 12 ವರ್ಷಗಳ ಕಾಲ ಗೃಹ ಬಂಧನದಲ್ಲಿರಿಸಿದ ಪತಿ!

ಹೆಚ್.ಡಿ.ಕೋಟೆ: ಪತ್ನಿಯ ಶೀಲಶಂಕಿಸಿದ ಪತಿಯೋರ್ವ ಆಕೆಯನ್ನು 12 ವರ್ಷಗಳ ಕಾಲ ಗೃಹ ಬಂಧನದಲ್ಲಿರಿಸಿದ ಅಮಾನವೀಯ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಮಟಕೆರೆ ಎಂಬಲ್ಲಿ ನಡೆದಿದೆ.
ಸುಮಾ ಎಂಬವರು 12 ವರ್ಷಗಳ ಹಿಂದೆ ಸಣ್ಣಾಲಯ್ಯ ಎಂಬಾತನನ್ನು ವಿವಾಹವಾಗಿದ್ದರು. ಸಣ್ಣಾಲಯ್ಯ ವಿಪರೀತ ಅನುಮಾನದ ಸ್ವಭಾವದವನಾಗಿದ್ದು, ಪತ್ನಿಯ ಜೊತೆಗೆ ಯಾರೂ ಮಾತನಾಡಬಾರದು, ಯಾರೂ ಹತ್ತಿರವಾಗಬಾರದು ಎಂದು ಸದಾ ಎಚ್ಚರಿಕೆ ವಹಿಸುತ್ತಿದ್ದ. ಹೀಗಾಗಿಯೇ ತನ್ನ ಮನೆಯ ಬಾಗಿಲಿಗೆ 3 ಬೀಗ ಹಾಕಿ, ಕಿಟಕಿಗಳನ್ನು ಕೂಡ ಮುಚ್ಚಿ ಮನೆಯಿಂದ ಹೊರಗೆ ತೆರಳುತ್ತಿದ್ದ.
ಮದುವೆಯಾದಂದಿನಿಂದ ಇಂದಿನ ವರೆಗೂ ಸಣ್ಣಾಲಯ್ಯ ಇದೇ ಛಾಳಿ ಮುಂದುವರೆಸುತ್ತಿದ್ದ. ಮದುವೆಯಾಗಿ 2 ಮಕ್ಕಳಾದರೂ ಆತ ಬದಲಾಗಿರಲಿಲ್ಲ. ಪತ್ನಿಯ ಜೊತೆಗೆ ಮಕ್ಕಳನ್ನೂ ಮನೆಯೊಳಗೆ ಕೂಡಿ ಹಾಕಿ ಸಣ್ಣಾಲಯ್ಯ ಹೊರ ಹೋಗುತ್ತಿದ್ದ. ಅಲ್ಲದೇ ಈತನ ಮನೆಯೊಳಗೆ ಶೌಚಾಲಯದ ವ್ಯವಸ್ಥೆ ಇಲ್ಲ ಹಾಗಾಗಿ ಸುಮಾ ಅವರು ಬಕೆಟ್ ನ್ನೇ ಶೌಚಾಲಯವಾಗಿ ಉಪಯೋಗಿಸುವಂತಾಗಿತ್ತು. ಸಣ್ಣಾಲಯ್ಯ ರಾತ್ರಿ ಮನೆಗೆ ಬಂದ ಬಳಿಕ ಪತ್ನಿಯ ಮಲಮೂತ್ರಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಸುರಿದು ಬರುತ್ತಿದ್ದ.
ಸುಮಾ ಅವರನ್ನು ಮದುವೆಯಾಗುವುದಕ್ಕಿಂತ ಮೊದಲು ಸಣ್ಣಾಲಯ್ಯ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ. ಈತನ ಸ್ವಭಾವದಿಂದ ಬೇಸತ್ತು ಅವರು ಆತನನ್ನು ತೊರೆದು ಹೋಗಿದ್ದರು. ಸಣ್ಣಾಲಯ್ಯನ ಕೃತ್ಯದ ಬಗ್ಗೆ ಗ್ರಾಮದಲ್ಲಿ ಹಲವಾರು ಬಾರಿ ನ್ಯಾಯ ಪಂಚಾಯತಿ ನಡೆದರೂ ಆತ ತಪ್ಪು ತಿದ್ದಿಕೊಳ್ಳದೇ ಮತ್ತೆ ತನ್ನ ಚಾಳಿ ಮುಂದುವರಿಸುತ್ತಿದ್ದ ಎನ್ನಲಾಗಿದೆ.
ಇನ್ನೂ ತಾನು ನೀಡುತ್ತಿರುವ ಟಾರ್ಚರ್ ಬಗ್ಗೆ ಯಾರಿಗಾದರೂ ತಿಳಿಸಿದರೆ, ಕೊಲೆ ಮಾಡುವುದಾಗಿ ಸುಮಾ ಅವರನ್ನು ಬೆದರಿಸಿದ್ದ. ಸಣ್ಣಾಲಯ್ಯನ ವರ್ತನೆಯ ಬಗ್ಗೆ ಗ್ರಾಮಸ್ಥರು, ನೆರೆಹೊರೆಯವರು ತಿಳಿದಿದ್ದರೂ, ಆತನ ಬಗ್ಗೆ ಮಾತನಾಡಲು ಹೆದರಿ ಮಾಹಿತಿ ನೀಡಲು ಹಿಂಜರಿಯುತ್ತಿದ್ದರು.
ಸುಮಾ ಅವರು ಪತಿಯ ದಿಗ್ಬಂಧನದಲ್ಲಿರುವುದನ್ನು ತಿಳಿದ ಅವರ ಸಂಬಂಧಿಕರೊಬ್ಬರು ನೀಡಿದ ಮಾಹಿತಿಯ ಮೇರೆಗೆ ವಕೀಲ ಸಿದ್ದಪ್ಪಾಜಿ, ಸಾಂತ್ವನ ಕೇಂದ್ರದ ಜಶೀಲ ಎಎಸ್ ಐ ಸುಭಾನ್ ಇತರರ ತಂಡ ಸುಮಾ ಮನೆಗೆ ಭೇಟಿ ನೀಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸುಮಾ ಮನೆಯ ಸುತ್ತ ಗ್ರಾಮಸ್ಥರು ಜಮಾಯಿಸಿದ್ದರು.
ಬುಧವಾರ ರಾತ್ರಿ ಘಟನೆ ಬೆಳಕಿಗೆ ಬಂದ ತಕ್ಷಣವೇ ರಾತ್ರೋರಾತ್ರಿ ಸುಮಾ ಮತ್ತು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಸದ್ಯ ಮನೆಯ ಬೀಗ ಮುರಿದು ಸುಮಾ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಮಹಿಳೆಯ ಒಪ್ಪಿಗೆಯ ಮೇರೆಗೆ ಸದ್ಯ ತವರು ಮನೆಯಲ್ಲಿ ಮಹಿಳೆಗೆ ಪೊಲೀಸರು ಆಶ್ರಯ ಕೊಡಿಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.