ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಸಿಕ್ಕಿಬಿದ್ದ ವಿಕಲಚೇತನ ಮಹಿಳೆಗೆ ಆಸರೆ ನೀಡಿದ ಪೊಲೀಸರು: ಮಾದರಿಯಾದ ಖಾಕಿ ಸೇವೆ - Mahanayaka
10:20 PM Thursday 18 - September 2025

ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಸಿಕ್ಕಿಬಿದ್ದ ವಿಕಲಚೇತನ ಮಹಿಳೆಗೆ ಆಸರೆ ನೀಡಿದ ಪೊಲೀಸರು: ಮಾದರಿಯಾದ ಖಾಕಿ ಸೇವೆ

31/03/2025

ತಮಿಳುನಾಡಿನ ಕಾಂಚೀಪುರಂನಲ್ಲಿ ಜೀವನೋಪಾಯಕ್ಕಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಪದೇ ಪದೇ ಸಿಕ್ಕಿಬಿದ್ದ ವಿಕಲಚೇತನ ಮಹಿಳೆಗೆ ಪೊಲೀಸ್ ಅಧಿಕಾರಿಯೊಬ್ಬರು
ಹೊಸ ಜೀವನವನ್ನು ನೀಡಿದ್ದಾರೆ. ಪೊಲೀಸ್ ಅಧಿಕಾರಿ ತನ್ನ ಸಹೋದ್ಯೋಗಿಗಳೊಂದಿಗೆ, ಮಹಿಳೆಯ ಕುಟುಂಬಕ್ಕೆ ಆಟೋರಿಕ್ಷಾ ಖರೀದಿಸಲು ಸಹಾಯ ಮಾಡಿದ್ದಾರೆ.

41 ವರ್ಷದ ಮೇರಿ ವಿಕಲಚೇತನರಾಗಿದ್ದು, ಎರಡೂ ಕಾಲುಗಳು ಮತ್ತು ಒಂದು ಕೈಯನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಪತಿ ಸುರೇಶ್ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಕುಟುಂಬವು ಆರ್ಥಿಕವಾಗಿ ಹೆಣಗಾಡುತ್ತಿತ್ತು. ಹೀಗಾಗಿ ಈ ಮಹಿಳೆಯು ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮುಂದಾದ್ರು. ಇದರಿಂದ ಪೊಲೀಸರು ಈ ಮಹಿಳೆಯನ್ನು ಎಂಟು ಬಾರಿ ಹಿಡಿದು ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ ಮಹಿಳೆಗೆ ಇರುವ ಕಷ್ಟಕರ ಪರಿಸ್ಥಿತಿಗಳಿಂದಾಗಿ ಆಗಾಗ್ಗೆ ಎಚ್ಚರಿಕೆಗಳೊಂದಿಗೆ ಬಿಡುಗಡೆ ಮಾಡಿದ್ದರು.

ಆಕೆಯ ದುಃಸ್ಥಿತಿಯನ್ನು ಗಮನಿಸಿದ ಮಣಿಮಂಗಲಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮಧುಸೂದನ್ ಮೇರಿಯನ್ನು ಸಂಪರ್ಕಿಸಿ ಆಕೆಯ ಮನೆಗೆ ಭೇಟಿ ನೀಡಿದರು. ಕುಟುಂಬದ ಕಷ್ಟಗಳನ್ನು ಅರಿತುಕೊಂಡ ಅವರು ದಿನಸಿ ಮತ್ತು ಆರ್ಥಿಕ ಸಹಾಯವನ್ನು ನೀಡಿದರು. ನಂತರ ಅವರು ಮೇರಿಗೆ ತಮ್ಮ ಜೀವನೋಪಾಯವನ್ನು ಬೆಂಬಲಿಸಲು ಆಟೋರಿಕ್ಷಾ ಪಡೆಯಲು ಪೊಲೀಸರು ಸಹಾಯ ಮಾಡುತ್ತಾರೆ ಎಂದು ಭರವಸೆ ನೀಡಿದ್ದಾರೆ.

“ನಾನು ಮೊದಲು ಅದನ್ನು ನಂಬಲು ಹಿಂಜರಿದಿದ್ದೆ. ಆದರೆ ನಂತರ ಮಣಿಮಂಗಲಂ ಪೊಲೀಸರಿಂದ ನನಗೆ ಕರೆ ಬಂತು. ನಾವು ಬಂದಾಗ, ಸ್ಟೇಷನ್ ಇನ್ಸ್ ಪೆಕ್ಟರ್ ಅಶೋಕನ್ ನಮಗೆ 50,000 ರೂ.ಗಳನ್ನು ಹಸ್ತಾಂತರಿಸಿದರು ಮತ್ತು ಆಟೋ ರಿಕ್ಷಾವನ್ನು ಖರೀದಿಸಲು ಹೆಚ್ಚಿನ ಸಹಾಯದ ಭರವಸೆ ನೀಡಿದರು. ಇಂದು, ನಮ್ಮ ಬಳಿ ವಾಹನವಿದೆ, ಮತ್ತು ನಾನು ಇನ್ನೆಂದೂ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ಮಧುಸೂದನ್ ಮತ್ತು ಇನ್ಸ್ಪೆಕ್ಟರ್ ಅಶೋಕನ್ ಅವರಿಗೆ ಭರವಸೆ ನೀಡಿದ್ದೇನೆ” ಎಂದು ಮೇರಿ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ