ತಮಿಳುನಾಡು ಲಾಕಪ್ ಡೆತ್ ಪ್ರಕರಣ: 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ಮಧುರೈ ನ್ಯಾಯಾಲಯ
ಮಧುರೈ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 2020ರ ತಮಿಳುನಾಡಿನ ಸಾಥಾನ್ ಕುಳಂನ ತಂದೆ–ಮಗನ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈನ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಒಂಬತ್ತು ಪೊಲೀಸರಿಗೆ ನ್ಯಾಯಾಲಯವು ಸೋಮವಾರ (ಏಪ್ರಿಲ್ 6, 2026) ಮರಣದಂಡನೆ ಶಿಕ್ಷೆ ವಿಧಿಸಿದೆ.
2020ರ ಜೂನ್ ತಿಂಗಳಲ್ಲಿ ಕೋವಿಡ್ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಪಿ. ಜಯರಾಜ್ (58) ಮತ್ತು ಅವರ ಪುತ್ರ ಬೆನಿಕ್ಸ್ (31) ಅವರನ್ನು ವಶಕ್ಕೆ ಪಡೆದಿದ್ದರು. ತೂತುಕುಡಿ ಜಿಲ್ಲೆಯ ಸಾಥಾನ್ ಕುಳಂ ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ತೀವ್ರ ಪೆಟ್ಟು ತಿಂದಿದ್ದ ಬೆನಿಕ್ಸ್ ಜೂನ್ 22ರಂದು ಮತ್ತು ಜಯರಾಜ್ ಜೂನ್ 23ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮಧುರೈನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಮುತ್ತುಕುಮಾರನ್ ಅವರು, ಇದು ‘ಅಪರೂಪದಲ್ಲಿ ಅಪರೂಪದ’ (Rarest of Rare) ಪ್ರಕರಣ ಎಂದು ಬಣ್ಣಿಸಿದ್ದಾರೆ. ಕಾನೂನು ರಕ್ಷಿಸಬೇಕಾದ ಪೊಲೀಸರೇ ಕಾನೂನು ಕೈಗೆತ್ತಿಕೊಂಡು ಅಮಾನವೀಯವಾಗಿ ವರ್ತಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕಠಿಣ ಶಿಕ್ಷೆ ಪ್ರಕಟಿಸಲಾಗಿದೆ.
ಮರಣದಂಡನೆಗೆ ಗುರಿಯಾದವರಲ್ಲಿ ಆಗಿನ ಇನ್ಸ್ಪೆಕ್ಟರ್ ಶ್ರೀಧರ್, ಸಬ್ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶ್ ಹಾಗೂ ಇತರ ಆರು ಮಂದಿ ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 10 ಮಂದಿ ಆರೋಪಿಗಳಿದ್ದರು, ಆದರೆ ವಿಚಾರಣೆಯ ಹಂತದಲ್ಲೇ ಒಬ್ಬ ಪೊಲೀಸ್ ಸಿಬ್ಬಂದಿ ಕೋವಿಡ್ನಿಂದ ಮೃತಪಟ್ಟಿದ್ದರು.
ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಮದ್ರಾಸ್ ಹೈಕೋರ್ಟ್ ಸೂಚನೆಯಂತೆ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಈ ಘಟನೆಯು ಅಂದು ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ನ್ಯಾಯಾಲಯವು ಮೃತರ ಕುಟುಂಬಕ್ಕೆ ಒಟ್ಟು 1.40 ಕೋಟಿ ರೂ.ಗಳ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























