ಸ್ವಂತ ಮಗಳನ್ನೇ ಗರ್ಭಿಣಿ ಮಾಡಿದ ಕಾಮುಕ ತಂದೆಗೆ ಗಲ್ಲು ಶಿಕ್ಷೆ! - Mahanayaka

ಸ್ವಂತ ಮಗಳನ್ನೇ ಗರ್ಭಿಣಿ ಮಾಡಿದ ಕಾಮುಕ ತಂದೆಗೆ ಗಲ್ಲು ಶಿಕ್ಷೆ!

dad
05/01/2026

ತಿರುನಲ್ವೇಲಿ (ತಮಿಳುನಾಡು): ಹೆಣ್ಣುಮಕ್ಕಳಿಗೆ ತಂದೆಯೇ ಮೊದಲ ರಕ್ಷಕ, ಆದರ್ಶಪ್ರಾಯ. ಆದರೆ ತಮಿಳುನಾಡಿನಲ್ಲಿ ರಕ್ಷಕನಾಗಬೇಕಿದ್ದ ತಂದೆಯೇ ರಾಕ್ಷಸನಾಗಿ ಬದಲಾದ ಘೋರ ಘಟನೆಯೊಂದು ನಡೆದಿದೆ. ತನ್ನ 14 ವರ್ಷದ ಅಪ್ರಾಪ್ತ ಮಗಳ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯವೆಸಗಿ ಆಕೆಯನ್ನು ಗರ್ಭಿಣಿ ಮಾಡಿದ ತಂದೆಗೆ ತಿರುನಲ್ವೇಲಿಯ ಪೋಕ್ಸೊ (POCSO) ವಿಶೇಷ ನ್ಯಾಯಾಲಯವು ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಣಗುಡಿ ಎಂಬಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದರು. ಎರಡನೇ ಪತ್ನಿಯ 14 ವರ್ಷದ ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದಳು. 2024 ರಿಂದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆಯ ತಂದೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು.

ಬೆಳಕಿಗೆ ಬಂದಿದ್ದು ಹೇಗೆ? 2025ರ ಜನವರಿಯಲ್ಲಿ ಬಾಲಕಿಯ ದೇಹದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಗಮನಿಸಿದ ತಾಯಿ, ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಬಾಲಕಿ 5 ತಿಂಗಳ ಗರ್ಭಿಣಿ ಎಂಬ ಆಘಾತಕಾರಿ ವಿಷಯ ತಿಳಿಸಿದ್ದಾರೆ. ಬಾಲಕಿಯನ್ನು ವಿಚಾರಿಸಿದಾಗ ಆಕೆ ತನ್ನ ತಂದೆಯೇ ಈ ಕೃತ್ಯ ಎಸಗಿರುವುದಾಗಿ ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾಳೆ. ತಕ್ಷಣವೇ ತಾಯಿ ವಲ್ಲಿಯೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಡಿಎನ್‌ಎ ಪರೀಕ್ಷೆಯಿಂದ ಸಾಬೀತಾದ ಅಪರಾಧ: ಪ್ರಕರಣದ ತನಿಖೆ ನಡೆಸಿದ ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸಿದ್ದರು. ಬಾಲಕಿಯ ಮಗುವಿನ ಡಿಎನ್‌ಎ ಆರೋಪಿಯ ಡಿಎನ್‌ಎಗೆ ಮ್ಯಾಚ್ ಆಗಿದ್ದು, ತಂದೆಯೇ ಮಗುವಿನ ತಂದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿತ್ತು.

ನ್ಯಾಯಾಲಯದ ತೀರ್ಪು: ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಧೀಶ ಸುರೇಶ್ ಕುಮಾರ್ ಅವರು, ಮಗಳ ಮೇಲೆ ಪದೇ ಪದೇ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿ ಮಾಡಿದ ಅಪರಾಧಕ್ಕಾಗಿ ತಂದೆಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ವಿಶೇಷವೆಂದರೆ, ಇದೇ ನ್ಯಾಯಾಲಯವು ಕೇವಲ 11 ದಿನಗಳ ಅಂತರದಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ ತಂದೆಗೆ ಮರಣದಂಡನೆ ವಿಧಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ