ಹಿಂದಿ ಪುಸ್ತಕ ತಂದಿಲ್ಲ ಎಂಬ ಕೋಪದಲ್ಲಿ ಬಾಲಕನ ಕಪಾಳಕ್ಕೆ ಬಾರಿಸಿ ಕತ್ತು ಹಿಸುಕಿದ ಶಿಕ್ಷಕ!

ದೆಹಲಿ: ಶಿಕ್ಷಕನೊಬ್ಬ ಕಪಾಳಮೋಕ್ಷ ಮಾಡಿದ ಪರಿಣಾಮ ಸರ್ಕಾರಿ ಶಾಲೆಯ ವಿದ್ಯಾರ್ಥಿಯೋರ್ವ ಆಸ್ಪತ್ರೆಗೆ ದಾಖಲಾದ ಘಟನೆ ಈಶಾನ್ಯ ದೆಹಲಿಯ ತುಕ್ಮೀರ್ಪುರದಲ್ಲಿ ನಡೆದಿದೆ.
ಆಗಸ್ಟ್ 7 ರಂದು 12 ವರ್ಷದ 6 ನೇ ತರಗತಿ ವಿದ್ಯಾರ್ಥಿ ತನ್ನ ಹಿಂದಿ ಪಠ್ಯಪುಸ್ತಕವನ್ನು ತರಲು ಮರೆತಿದ್ದಕ್ಕಾಗಿ ಕೋಪಗೊಂಡ ಶಿಕ್ಷಕ ಕಪಾಳಮೋಕ್ಷ ಮಾಡಿದ್ದಾನೆ. ಇದರ ಪರಿಣಾಮ ಕೆಲವು ದಿನಗಳ ನಂತರ ಅಸ್ವಸ್ಥಗೊಂಡ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಾಲಕನ ತಂದೆಯ ದೂರಿನ ಮೇರೆಗೆ ಆರೋಪಿ ಶಿಕ್ಷಕ ಸಾದುಲ್ ಹಸನ್ ವಿರುದ್ಧ ದಯಾಲ್ಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಾಲಕ ತನ್ನ ಹಿಂದಿ ಪಠ್ಯಪುಸ್ತಕವನ್ನು ಶಾಲೆಗೆ ತರಲು ಮರೆತಿದ್ದ. ಇದರಿಂದ ಕೋಪಗೊಂಡ ಶಿಕ್ಷಕ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಾಗದ ಬಾಲಕ ತರಗತಿಯಿಂದ ಹೊರಗೆ ಹೋಗುತ್ತಿದ್ದಾಗ ಹಸನ್ ಆತನನ್ನುಹೊರ ಹೋಗದಂತೆ ತಡೆದು ವಿದ್ಯಾರ್ಥಿಗೆ ಥಳಿಸಿದ್ದಾನೆ. ಆರೋಪಿ ಶಿಕ್ಷಕ ಬಾಲಕನ ಕುತ್ತಿಗೆ ಹಿಸುಕಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಬಾಲಕನ ಸ್ಥಿತಿ ಹದಗೆಟ್ಟಿದ್ದರಿಂದ ಆತನನ್ನುಹೆತ್ತವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಬಾಲಕನ ತಂದೆ ಪೊಲೀಸರ ಮೊರೆ ಹೋಗಿದ್ದಾರೆ.ಪ್ರಕರಣ ದಾಖಲಾಗುತ್ತಿದ್ದಂತೆಯೇ ಒಂದೆಡೆ ಶಿಕ್ಷಕನನ್ನು ಬಂಧಿಸಲಾಗಿದೆ, ಮತ್ತೊಂದೆಡೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.