ಅಕ್ಕಾ ಅಕ್ಕ ಅಂತ ಕರೆಯುತ್ತಿದ್ದವನೇ ಟೀಚರ್ ನ್ನು ಬರ್ಬರವಾಗಿ ಕೊಂದ: 30 ಗಂಟೆಗಳೊಳಗೆ ಆರೋಪಿ ಅರೆಸ್ಟ್

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದ ಟೀಚರ್ ದೀಪಿಕಾ ಜನವರಿ 20ರಂದು ಮಧ್ಯಾಹ್ನ ಶಾಲೆಯಿಂದ ತೆರಳಿದ್ದರು. ಬಳಿಕ ಅವರು ನಾಪತ್ತೆಯಾಗಿದ್ದರು. ಅವರ ಸ್ಕೂಟರ್ ಸಂಜೆ ಬೆಟ್ಟದ ಸಮೀಪ ಪತ್ತೆಯಾಗಿತ್ತು.
ಈ ನಡುವೆ ಮೇಲುಕೋಟೆಯಲ್ಲಿ ದೀಪಿಕಾ ಅವರನ್ನು ವ್ಯಕ್ತಿಯೋರ್ವ ಎಳೆದಾಡುತ್ತಿರುವ ದೃಶ್ಯವನ್ನು ಬೆಟ್ಟದ ಮೇಲಿನಿಂದ ಪ್ರವಾಸಿಯೊಬ್ಬರು ವಿಡಿಯೋ ಮಾಡಿದ್ದರು. ದೀಪಿಕಾ ಅವರ ಪತ್ತೆಗಾಗಿ ನಿರಂತರವಾಗಿ ಹುಡುಕಾಡಿದ ಬಳಿಕ ಸೋಮವಾರ ಸಂಜೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಅವರ ಮೃತದೇಹ ಪತ್ತೆಯಾಗಿತ್ತು.
ಮೃತದೇಹ ಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿ ನಿತೀಶ್ ಗ್ರಾಮದಿಂದ ಪರಾರಿಯಾಗಿದ್ದ. ಜೊತೆಗೆ ದೀಪಿಕಾ ಅವರ ಫೋನ್ ಗೆ ಕೊನೆಯ ಕರೆ ಮಾಡಿದ್ದು ಇದೇ ನಿತೀಶ್ ಆಗಿದ್ದ. ಅಲ್ಲದೇ ನಿತೀಶನೇ ಕೊಲೆಗಾರ ಎಂದು ದೀಪಿಕಾ ಅವರ ಪತಿ ಲೋಕೇಶ್ ಆರೋಪ ಮಾಡಿದ್ದರು.
ಇದೀಗ ದೀಪಿಕಾ ಮೃತದೇಹ ಸಿಕ್ಕಿ 30 ಗಂಟೆಗಳೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದೇ ಆರೋಪಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಇನ್ನೂ ದೀಪಿಕಾ ಅವರ ಹತ್ಯೆಗೆ ಕಾರಣಗಳೇನು ಎನ್ನುವ ನೂರು ಪ್ರಶ್ನೆಗಳು ಕೇಳಿ ಬಂದಿದ್ದು, ಪೊಲೀಸರು ತನಿಖೆಯ ನಂತರವೇ ಸ್ಪಷ್ಟ ಮಾಹಿತಿ ಸಿಗಬೇಕಿದೆ.