ಹೃದಯ ವಿದ್ರಾವಕ ಘಟನೆ:  ಗಾಯಕ್ಕೆ ಚಿಕಿತ್ಸೆ ಪಡೆದು ಪತಿ, ಮಗುವಿನೊಂದಿಗೆ ಮನೆಗೆ ತೆರಳುತ್ತಿದ್ದ ಶಿಕ್ಷಕಿ ಅಪಘಾತಕ್ಕೆ ಬಲಿ! - Mahanayaka

ಹೃದಯ ವಿದ್ರಾವಕ ಘಟನೆ:  ಗಾಯಕ್ಕೆ ಚಿಕಿತ್ಸೆ ಪಡೆದು ಪತಿ, ಮಗುವಿನೊಂದಿಗೆ ಮನೆಗೆ ತೆರಳುತ್ತಿದ್ದ ಶಿಕ್ಷಕಿ ಅಪಘಾತಕ್ಕೆ ಬಲಿ!

anitha
29/01/2024


Provided by

ಪುತ್ತೂರು: ಬೈಕ್ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಮೀಪದ ಪೋಳ್ಯ ಎಂಬಲ್ಲಿ ನಡೆದಿದೆ.

ಮಾಣಿ ಖಾಸಗಿ ಶಾಲಾ ಶಿಕ್ಷಕಿ ಅನಿತಾ(35) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅನಿತಾ ಅವರು ಕೆಲವು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದರು.  ಗಾಯಕ್ಕೆ ಚಿಕಿತ್ಸೆ ಪಡೆದುಕೊಳ್ಳಲೆಂದು ಇಂದು(ಜ.29) ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು, ಚಿಕಿತ್ಸೆ ಪಡೆದು ವಾಪಸ್ ಆಗುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ವೇಳೆ ಬೈಕ್ ನಲ್ಲಿ ಹಿಂಬದಿ ಸವಾರೆಯಾಗಿದ್ದ ಅನಿತಾ ಹಾಗೂ ಅವರ ಮಗು ರಸ್ತೆಗೆಸೆಯಲ್ಪಟ್ಟಿದ್ದು, ಅನಿತಾ ಅವರಿಗೆ ಗಂಭೀರವಾಗಿ ಗಾಯವಾಗಿತ್ತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಕೊನೆಯುಸಿರೆಳೆದಿದ್ದರು.

ಅನಿತಾ ಅವರ ಪತಿ ಸುರೇಶ್ ಕುಲಾಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮಗುವಿನ ಭುಜದ ಭಾಗಗಳಿಗೆ ಗಾಯವಾಗಿದೆ. ಘಟನೆ ಸಂಬಂಧ ಪತಿ ಸುರೇಶ್ ಕುಲಾಲ್ ಅವರು ಪುತ್ತೂರು ಸಂಚಾರಿ ಪೊಲಿಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ