ತಾನೇ ಕಟ್ಟಿಸಿದ ಸಮಾಧಿಯಲ್ಲಿ ಮಣ್ಣಾದ ಈ ವ್ಯಕ್ತಿ ಎಷ್ಟೊಂದು ಸ್ವಾಭಿಮಾನಿ ಗೊತ್ತಾ?

ಚಾಮರಾಜನಗರ: ವ್ಯಕ್ತಿಯೊಬ್ಬರು 30 ವರ್ಷಗಳ ಹಿಂದೆಯೇ ತನ್ನ ಸಮಾಧಿ ನಿರ್ಮಾಣ ಮಾಡಿದ್ದು, ಇದೀಗ ಅವರ ನಿಧನದ ಬಳಿಕ ಅದೇ ಸಮಾಧಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಿರುವ ಅಪರೂಪದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ನಂಜೇದೇವನಪುರ ನಿವಾಸಿ ಪುಟ್ಟನಂಜಪ್ಪನವರು ತಮ್ಮ ಸಾವಿನಲ್ಲೂ ಸ್ವಾಭಿಮಾನ ಮೆರೆದಿದ್ದು, ತಾವೇ ಕಟ್ಟಿಸಿದ ಸಮಾಧಿಯಲ್ಲಿ ಸಮಾಧಿಯಾದ್ದಾರೆ. 30 ವರ್ಷಗಳ ಹಿಂದ ತಮ್ಮ ಜಮೀನಿನಲ್ಲಿ ತಾವೇ ತಮಗೆ ಸಮಾಧಿ ನಿರ್ಮಿಸಿಕೊಂಡಿದ್ದರು.
ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದರು. ಅವರ ಆಸೆಯಂತೆ ಕುಟುಂಬಸ್ಥರು ಅವರೇ ಕಟ್ಟಿಸಿದ ಸಮಾಧಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ತನ್ನ ಅಂತ್ಯಕ್ರಿಯೆ ಮಕ್ಕಳಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಮೊದಲೇ ಎಲ್ಲ ವ್ಯವಸ್ಥೆಗಳನ್ನು ಮಾಡಿರುವ ಪುಟ್ಟನಂಜಪ್ಪ, ತನ್ನ ತಿಥಿ ಕಾರ್ಯಕ್ಕೂ 1 ಲಕ್ಷ ರೂಪಾಯಿ ತೆಗೆದಿಟ್ಟಿದ್ದರು ಎನ್ನಲಾಗಿದೆ. ಸಾವಿಗೂ ಮೊದಲು ತನ್ನೆಲ್ಲ ಜವಾಬ್ದಾರಿಗಳನ್ನು ಮಾಡಿ ಮುಗಿಸಿದ್ದ ಪುಟ್ಟನಂಜಪ್ಪ, ಮಕ್ಕಳಿಗೆ ತನ್ನ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಿದ್ದಾರೆ.
ಪತ್ನಿಯ ಸಮಾಧಿಯ ಬಳಿಯೇ ತನ್ನ ಸಮಾಧಿ ನಿರ್ಮಾಣವಾಗಬೇಕು ಎನ್ನುವುದು ಪುಟ್ಟನಂಜಪ್ಪ ಅವರ ಆಸೆಯಾಗಿತ್ತು. ಒಂದು ಪರಿಪೂರ್ಣ ಜೀವನ ನಡೆಸಿದ ತೃಪ್ತಿಯೊಂದಿಗೆ ಪುಟ್ಟನಂಜಪ್ಪ ಅವರು ವಿದಾಯ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka