ನಾಗರ ಪಂಚಮಿ ಹುತ್ತಕ್ಕೆ ಹಾಲು ಹಾಕಬೇಡಿ ಬಡವರಿಗೆ ವಿತರಿಸಿ | ಪಟ್ಟದ್ದೇವರ ಜನ್ಮದಿನ ಅರ್ಥಪೂರ್ಣ ಆಚರಣೆ - Mahanayaka

ನಾಗರ ಪಂಚಮಿ ಹುತ್ತಕ್ಕೆ ಹಾಲು ಹಾಕಬೇಡಿ ಬಡವರಿಗೆ ವಿತರಿಸಿ | ಪಟ್ಟದ್ದೇವರ ಜನ್ಮದಿನ ಅರ್ಥಪೂರ್ಣ ಆಚರಣೆ

bedar 1
06/08/2024


Provided by

ಔರಾದ್ : ಪಟ್ಟಣದ ಬಸವ ಗುರುಕುಲ ಪಬ್ಲಿಕ್ ಸ್ಕೂಲ್ ಶಾಲೆಯ ಸಹಯೋಗದಲ್ಲಿ ಗುರುಬಸವ ಪಟ್ಟದ್ದೇವರ 42ನೇ ಜನ್ಮದಿನವನ್ನು ಇಲ್ಲಿಯ ಅಲೆಮಾರಿ ಜನಾಂಗದ ಬಡಾವಣೆಯಲ್ಲಿ ಅನಾಥ ಮತ್ತು ಬಡ ಮಕ್ಕಳಿಗೆ ಹಾಲು, ಹಣ್ಣು ಹಂಪಲು ವಿತರಿಸುವ ಮೂಲಕ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಿತು.

ತಾ.ಪಂ. ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ಈ ಭಾಗದ ಧಾರ್ಮಿಕ, ಸಾಮಾಜಿಕ, ಸಾಹಿತ್ತಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಗುರುಬಸವ ಪಟ್ಟದ್ದೇವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

42ರ ಹರೆಯದ ಶ್ರೀಗಳು ನಡೆದು ಬಂದ ದಾರಿ ರೋಚಕ. ಔರಾದ್ ತಾಲೂಕಿನ ಚಟ್ನಾಳ ಗ್ರಾಮದ ಮೂಲಗೆ ಕುಟುಂಬದ ಪೂಜ್ಯರ ಪೂರ್ವಾಶ್ರಮದ ಹೆಸರು ರಾಜಕುಮಾರ. 5ನೇ ತರಗತಿವರೆಗೆ ಔರಾದಲ್ಲಿ ಅಭ್ಯಸಿಸಿದ ಅವರು 6ನೇ ತರಗತಿಗೆ ಭಾಲ್ಕಿ ಮಠದ ಶ್ರೀ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯ ಸೇರಿ ಶಿಕ್ಷಣ ಪಡೆದರು. ಚಿಕ್ಕ ವಯಸ್ಸಿನಲ್ಲಿಯೇ ಭಕ್ತಿ, ಅಧ್ಯಾತ್ಮ, ನಿಸ್ವಾರ್ಥ ಸೇವೆ ಗುಣಗಳನ್ನು ಬೆಳೆಸಿಕೊಂಡರು. ಶಿಕ್ಷಣ ಜತೆಗೆ ಭಾಲ್ಕಿ ಮಠದ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಿದರು. ಇವರ ಸೇವಾ ಕಾರ್ಯ, ಅಧ್ಯಾತ್ಮ ಸೆಳೆತ ಗಮನಿಸಿ 2016ರಲ್ಲಿ ಮಠದ ಪೀಠಾಧಿಪತಿಯಾಗಿ ಮಾಡಲಾಯಿತು.

ಈ ಭಾಗದ ಯುವಕರು ಹೊಂದಿದ ದುಶ್ಚಟಗಳನ್ನು ಹೋಗಲಾಡಿಸಲು ಶ್ರೀ ಗುರುಬಸವ ಪಟ್ಟದ್ದೇವರು ಜೋಳಿಗೆ ಹಿಡಿದರು. ಪ್ರತಿ ಗ್ರಾಮಕ್ಕೆ ತೆರಳಿ ಜಾಗೃತಿ ಮೂಡಿಸಿದರು. ವಿವಿಧ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಉಜ್ವಲ ಭವಿಷ್ಯದ ಬೋಧನೆ ಮಾಡಿದರು. ಪೂಜ್ಯರ ಸೇವಾ ಕಾರ್ಯ ಗಮನಿಸಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿದೆ ಎಂದರು.

ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಕಾರ್ಯಕ್ಕೆ ಶ್ಲಾಘನೀಯ ಎಂದರು.

ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಮುಸಕೆ ಮಾತನಾಡಿ, ಪಟ್ಟದ್ದೇವರು ಪ್ರತಿ ಹಳ್ಳಿಯಲ್ಲಿ ದುರ್ಗುಣ ಭಿಕ್ಷೆ, ಸನ್ಮಾರ್ಗದ ದೀಕ್ಷೆ ಅಭಿಯಾನ ನಡೆಸುತ್ತಿದ್ದಾರೆ. ಪೂಜ್ಯರ ಜೋಳಿಗೆ ಅಭಿಯಾನದಿಂದ ಹಲವರು ದುಶ್ಚಟಗಳನ್ನು ತೊರೆದಿದ್ದಾರೆ. ಮದ್ಯದ ಬಾಟಲಿ, ಬೀಡಿ, ಸಿಗರೇಟ್, ಗುಟ್ಟಾ, ತಂಬಾಕು ಚೀಟಿಗಳನ್ನು ಭಿಕ್ಷೆ ಬೇಡಿ ಜೋಳಿಗೆಗೆ ಹಾಕಿಸಿಕೊಂಡು ಜನರನ್ನು ದುಶ್ಚಟ ಮುಕ್ತರನ್ನಾಗಿಸಿದ್ದಾರೆ ಎಂದರು.

ಬಿಇಒ ಸುಧಾರಾಣಿ ಮಾತನಾಡಿ, ಭಾಲ್ಕಿ ಹಿರೇಮಠಕ್ಕೆ ದೊಡ್ಡ ಇತಿಹಾಸ ಇದೆ. ಲಿಂಗೈಕ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಹಾಗೂ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಗುರುಬಸವ ಶ್ರೀಗಳು ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಜನ್ಮದಿನದಂದು ಇಂತಹ ಮಾದರಿ ಕಾರ್ಯಕ್ರಮ ಏರ್ಪಡಿಸಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಶಾಲೆಯ ಪ್ರಾಂಶುಪಾಲರಾದ ಖುಷ್ಬೂ ಜ್ಯೋತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಶಿಕ್ಷಕರಾದ ಫರೀದಾ, ಸವಿತಾ ಗಡ್ಡೆ, ಪ್ರೀಯಂಕಾ, ಸುಜಾತಾ ಕೋಟೆ, ಸಂಗೀತಾ, ಶೀರಿನ್ ಸೇರಿದಂತೆ ಅನೇಕರಿದ್ದರು. ಮಂಜುಳಾ ಕೋಟೆ ಸ್ವಾಗತಿಸಿದರು. ಅನಿಲ ಜಿರೋಬೆ ನಿರೂಪಿಸಿದರು. ಪರಮೇಶ್ ಲಕ್ಷಟ್ಟೆ ವಂದಿಸಿದರು.bedar3

50 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ:

ಗುರುಬಸವ ಪಟ್ಟದ್ದೇವರ ಜನ್ಮದಿನದ ನಿಮಿತ್ತ ನಾನಾ ರಂಗದಲ್ಲಿ ಸಾಧನೆ ಮಾಡಿರುವ ಸುಮಾರು 50 ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಣೆ ಮಾಡಲಾಯಿತು. ಶ್ರೀಗಳ ಜನ್ಮದಿನದಂದು ಮಕ್ಕಳಿಗೆ ಪ್ರೇರಣೆ ಕಾರ್ಯಕ್ರಮ ಮಾಡಿರುವದು ಮಾದರಿಯಾಗಿದೆ ಎಂದು ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀಗಳ ಜನ್ಮದಿನ ಪಂಚಮಿ ಜಾಗೃತಿ:

ಭಾಲ್ಕಿ ಶ್ರೀಗಳಾದ ಗುರುಬಸವ ಪಟ್ಟದ್ದೇವರ ಜನ್ಮದಿನದಲ್ಲಿ ನಾಗರಪಂಚಮಿಯಂದು ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆ ಮಾಡಬಾರದು ಎಂದು ಬಡ, ಅನಾಥ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಹಣ್ಣು ವಿತರಣೆ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಹುತ್ತಕ್ಕೆ ಹಾಲು ಹಾಕುವದರಿಂದ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ 40ಸಾವಿರಕ್ಕಿಂತ ಹೆಚ್ಚು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹುತ್ತಕ್ಕೆ ಎರೆದು ಹಾಲನ್ನು ವ್ಯರ್ಥ ಮಾಡುವ ಬದಲು ಮಕ್ಕಳಿಗೆ ಕೊಟ್ಟರೆ ಅದು ಅಮೃತವಾಗುತ್ತದೆ. ಈ ಕುರಿತು ಜನರು ಚಿಂತಿಸಬೇಕಾದ ಅಗತ್ಯವಿದೆ ಎಂದು ಜಾಗೃತಿ ಮೂಡಿಸಲಾಯಿತು.

ವರದಿ: ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ