ಕಾರು ಕದಿಯಲು ರಾತ್ರಿ ವೇಳೆ ಬಂದ ಕಳ್ಳನಿಗೆ ಕಾರಿನೊಳಗೆ ನಿದ್ದೆ: ಬೆಳಿಗ್ಗೆ ಪೊಲೀಸರಿಗೆ ಸಿಕ್ಕಿಬಿದ್ದ

ಫರೀದಾಬಾದ್: ದುಶ್ಚಟದ ದಾಸನಾಗಿರುವ ವ್ಯಕ್ತಿ ಒಳ್ಳೆಯ ಕೆಲಸ ಮಾತ್ರವಲ್ಲ ಕೆಟ್ಟ ಕೆಲಸಗಳನ್ನೂ ಸರಿಯಾಗಿ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಕಾರು ಕದಿಯಲು ಬಂದ ಕಳ್ಳನೋರ್ವ, ಅಮಲು ಪದಾರ್ಥಗಳ ನಶೆಯಲ್ಲಿ ಕಾರಿನೊಳಗೆಯೇ ನಿದ್ರಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ.
ವಾಹನದ ಮಾಲಿಕ ಹಿಂದಿನ ದಿನ ರಾತ್ರಿ ಎಂದಿನಂತೆಯೇ ಕಾರು ತಂದು ನಿಲ್ಲಿಸಿದ್ದರು. ಬೆಳಿಗ್ಗೆ ಕಾರನ್ನು ತೊಳೆಯಲೆಂದು ಬಂದ ವೇಳೆ ಕಾರಿನ ಸೈಡ್ ಲಾಕ್ ನ್ನು ಯಾರೋ ಒಡೆದಿರೋದು ಕಂಡು ಬಂದಿದೆ. ಸ್ವಲ್ಪ ಸಮೀಪಿಸುತ್ತಿದ್ದಂತೆಯೇ ಕಾರಿನೊಳಗೆ ಅಪರಿಚಿತನೋರ್ವ ಸುಖ ನಿದ್ದೆಯಲ್ಲಿರುವುದು ಕಂಡು ಬಂದಿದೆ.
ತಕ್ಷಣವೇ ಕಾರಿನ ಮಾಲಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನೊಳಗಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಕಾರು ಕಳ್ಳನ ಬಳಿ ಡ್ರಗ್ಸ್ ಪತ್ತೆಯಾಗಿದ್ದು, ಡ್ರಗ್ಸ್ ಸೇವಿಸಿದ ಬಳಿಕ ಕಳ್ಳ ಗಾಢವಾದ ನಿದ್ದೆಗೆ ಜಾರಿದ್ದ. ಸರಿಯಾದ ಸಮಯಕ್ಕೆ ಕಾರಿನೊಳಗಿನ ಬೆಚ್ಚನೆಯ ಸ್ಥಳ ಕೂಡ ಸಿಕ್ಕಿದ್ದರಿಂದ ಅಲ್ಲೇ ಕಳ್ಳ ನಿದ್ದೆಗೆ ಜಾರಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.