ಕಾರ್ಮಿಕರಿಲ್ಲದೆ ಸಮಾಜದ ಚಕ್ರ ತಿರುಗದು: ಬಿ.ಕೆ.ಇಮ್ತಿಯಾಜ್ - Mahanayaka

ಕಾರ್ಮಿಕರಿಲ್ಲದೆ ಸಮಾಜದ ಚಕ್ರ ತಿರುಗದು: ಬಿ.ಕೆ.ಇಮ್ತಿಯಾಜ್

b k imtiaz
01/05/2025


Provided by

ಮಂಗಳೂರು: ಅಮೇರಿಕಾದ ಚಿಕಾಗೋ ನಗರದ ಹೇ ಮಾರ್ಕೆಟಿನಲ್ಲಿ ನಡೆದ ಕಾರ್ಮಿಕರ ಶೋಷಣೆ ವಿರುದ್ಧ ನಡೆದ ಧೀರೋದ್ದಾತ ಹೋರಾಟ ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನಾಗಿ ಆಚರಿಸಲಾಗುತ್ತಿದೆ.  ತ್ಯಾಗ ಬಲಿದಾನದ ಮೂಲಕ ಕಾರ್ಮಿಕರು ಜಗತ್ತಿನ ಪ್ರಬಲ ಶಕ್ತಿಯಾಗಿದ್ದಾರೆ.  ಕಾರ್ಮಿಕರಿಲ್ಲದೆ ಸಮಾಜದ ಚಕ್ರ ತಿರುಗಲು ಸಾಧ್ಯವಿಲ್ಲ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷರೂ, ಬಂದರು ಶ್ರಮಿಕರ ಸಂಘದ ಅಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ಅವರು ಹೇಳಿದರು.

ಹಳೆ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರ ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ (ಮೇ ದಿನ ) ಧ್ವಜಾರೋಹಣ ನಡೆಸಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಕಾರ್ಮಿಕರ ಸವಲತ್ತುಗಳಿಗೆ ತಡೆ ಹಿಡಿದು ಆಧುನಿಕ ಜೀತ ಪದ್ದತಿಯನ್ನು ಪರೋಕ್ಷವಾಗಿ ಜಾರಿಗೊಳಿಸಲು ಸರಕಾರಗಳು ಸಹಕರಿಸುತ್ತಿವೆ. ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಿ ಕಾರ್ಮಿಕ ಸಂಹಿತೆಯನ್ನು  ಅನುಷ್ಠಾನಗೊಳಿಸಲು ಹೊರಟಿರುವ ಕೇಂದ್ರ ಸರಕಾರ ಕಾರ್ಪೋರೇಟ್ ಲಾಬಿಗಳ ಕೈಗೊಂಬೆಯಾಗಿ ಆಡಳಿತ ನಡೆಸುತ್ತಿದೆ ಎಂದು ಇಮ್ತಿಯಾಜ್ ಟೀಕಿಸಿದರು.

ಕಾರ್ಯಕ್ರಮದಲ್ಲಿ ಬಂದರು ಶ್ರಮಿಕರ ಸಂಘದ ಮುಖಂಡರಾದ ಫಾರೂಕ್ ಉಲ್ಲಾಳಬೈಲ್, ಹರೀಶ್ ಕೆರೆಬೈಲ್, ಚಂದ್ರಹಾಸ್, ಮಜೀದ್ ಉಳ್ಳಾಲ, ಸಿದ್ದಿಕ್ ಬೆಂಗರೆ, ಶಮೀರ್ ಬೋಳಿಯಾರ್, ಜಾಫರ್ ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.

ನಂತರ  ಬಂದರು ಸಗಟು ಮಾರುಕಟ್ಟೆಯಾದ್ಯಂತ ಘೋಷಣೆ ಕೂಗುತ್ತಾ,  ಕಾರ್ಮಿಕರು ಮೆರವಣಿಗೆ ನಡೆಸಿದರು. ಸದಾ ಗಿಜಿಗಿಡುತ್ತಿದ ಸಗಟು ಮಾರುಕಟ್ಟೆ ಕಾರ್ಮಿಕರ ದಿನಾಚರಣೆ ಹಿನ್ನೆಲೆ ಕಾರ್ಮಿಕರಿಲ್ಲದೆ ಬಿಕೋ ಎನ್ನುತ್ತಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ