ನಾಗರಿಕ ರಕ್ಷಣೆ ಮಾಡಬೇಕಾದ ಪೊಲೀಸ್ ಸಿಬ್ಬಂದಿಯಿಂದಲೇ ಯುವತಿಗೆ ಅನ್ಯಾಯ: ಪ್ರೀತಿ ಹೆಸರಿನಲ್ಲಿ ಯುವತಿಗೆ ವಂಚಿಸಿದ ಕಾನ್ಸ್ ಟೇಬಲ್

ವಿಜಯಪುರ: ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ಲೈಂಗಿಕವಾಗಿ ಬಳಕೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿಜಯಪುರದಲ್ಲಿ ಈ ಘಟನೆ ನಡೆದಿದ್ದು, ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ವಿನಾಯಕ್ ಟಕ್ಕಳಕಿ ಓರ್ವ ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ದೈಹಿಕವಾಗಿ ಬಳಕೆ ಮಾಡಿಕೊಂಡು ವಂಚನೆ ಮಾಡಿದ್ದಾರೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿ ಕಳೆದ ಎಂಟು ತಿಂಗಳ ಹಿಂದೆ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿಗೆ ಪರಿಚಯವಾಗಿ, ಪರಸ್ಪರ ಫೋನ್ ನಂಬರ್ ಗಳನ್ನು ಬದಲಾಯಿಸಿಕೊಂಡು ಬಳಿಕ ಇಬ್ಬರ ಮಧ್ಯೆ ಪರಸ್ಪರ ವಾಟ್ಸಪ್ ನಲ್ಲಿ ಮೆಸೇಜ್ ಮಾಡೋದು, ಕಾಲ್ ಮಾಡೋದು ಆರಂಭವಾಗಿತ್ತು.
ಇದೇ ಸ್ನೇಹ ಇಬ್ಬರ ನಡುವೆ ಪ್ರೀತಿಗೆ ತಿರುಗಿ, ಪರಸ್ಪರ ಸಲುಗೆಯಿಂದ ಇದ್ದರು. ಇದೇ ಸಲುಗೆಯಲ್ಲಿ ಯುವತಿ ಜೊತೆಗೆ ಹಲವಾರು ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ, ಯುವತಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.