ರಾಜ್ಯದಲ್ಲಿ ಬಿಜೆಪಿ ಇಲ್ಲ, ಬಿಎಸ್ ಪಿ ಇದೆ, ಬಿಲ್ಲವ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ: ಸತ್ಯಜಿತ್ ಸುರತ್ಕಲ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಪದ್ಮರಾಜ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ನಾವು ಬೆಂಬಲಿಸುತ್ತೇವೆ ಎಂದು ಹಿಂದೂಪರ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಘೋಷಣೆ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರೂ ಆಗಿರುವ ಸತ್ಯಜಿತ್ ಸುರತ್ಕಲ್, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾರಾಯಣಗುರು ವಿಚಾರ ವೇದಿಕೆ ನಾರಾಯಣ ಗುರು ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು.
ನಾರಾಯಣಗುರು ವಿಚಾರ ವೇದಿಕೆ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಸಮುದಾಯವೂ ಪಕ್ಷದ ಬದಲು ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುವವರನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಕಳೆದ ಎರಡು ತಿಂಗಳಿನಿಂದ ಬಿಜೆಪಿ ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದೆ, ಆದ್ರೆ ಅಭ್ಯರ್ಥಿಯಾಗಿ ಬಿಜೆಪಿಯಿಂದ ಬ್ರಿಜೇಶ್ ಚೌಟಗೆ ಟಿಕೆಟ್ ನೀಡಿದ್ರು. ನಾನು ಬ್ರಾಹ್ಮಣ, ಬಂಟ, ಒಕ್ಕಲಿಗ ಆಗಿದ್ದಿದ್ರೆ ನಿಸ್ಸಂದೇಹವಾಗಿ ಟಿಕೆಟ್ ಸಿಗುತ್ತಿತ್ತು. ಆದರೆ ನಾನು ಶೂದ್ರನಾಗಿ ಹುಟ್ಟಿದ್ದೇನೆ ಅದಕ್ಕೆ ಟಿಕೆಟ್ ನೀಡಿಲ್ಲ ಎಂದು ಇದೇ ವೇಳೆ ಅವರು ಬೇಸರ ವ್ಯಕ್ತಪಡಿಸಿದರು.
ಸೂಕ್ತ ಸ್ಥಾನಮಾನಕ್ಕಾಗಿ ನನ್ನ ಬೆಂಬಲಿಗರು ಬಿಜೆಪಿಗೆ ಬೇಡಿಕೆ ಇಟ್ಟಿದ್ರು, ಘೋಷಣೆಯಾಗಿ ಎರಡು ಮೂರು ವಾರ ಕಳೆದಿದೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಬಿಜೆಪಿ ವರಿಷ್ಠರು ಹಲವು ಬಾರಿ ಸಮಯವಕಾಶ ಕೇಳಿದ್ರು, ಆದರೆ ಯಾವುದೇ ಬೆಳವಣಿಗೆಯಾಗಿಲ್ಲ ಆದ್ದರಿಂದ ಟೀಂ ಸತ್ಯಜಿತ್ ಸುರತ್ಕಲ್ ಹಾಗೆಯೇ ಮುಂದುವರೆಯುತ್ತೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಈಗ ಬಿಜೆಪಿ ಇಲ್ಲ, ಬಿಎಸ್ ಪಿ ಇದೆ. ವಿಧಾನ ಸಭಾ ಚುನಾವಣೆ ತನಕ ಬಿ ಎಲ್ ಪಿ ಇತ್ತು. ಅಂದ್ರೆ ಬಿ.ಎಲ್.ಸಂತೋಷ್ ಬಣ ಇತ್ತು ಈಗ ಬಿ.ಎಸ್.ಯಡಿಯೂರಪ್ಪ ಬಣದ ಬಿಎಸ್ ಪಿ ಇದೆ ಎಂದು ವ್ಯಂಗ್ಯವಾಡಿದರು.
ಜನಾರ್ದನ್ ಪೂಜಾರಿ ಸೋಲಲು ನಾನು ಕಾರಣನಾಗಿದ್ದೆ, ಅವಾಗ ನಮಗೆ ಗೊತ್ತಿರಲಿಲ್ಲ, ನಮ್ಮ ದುರ್ದೈವ ನಮ್ಮನ್ನ ಬಳಸಿ ಜನಾರ್ಧನ ಪೂಜಾರಿಯ ಅವಸನ ಮಾಡಿದ್ರು. ಬ್ರಹ್ಮಕಲಶದಲ್ಲಿ ನಾಲ್ಕು ರೀತಿ ಅಡುಗೆ, ನಾಲ್ಕು ರೀತಿ ಊಟದ ವ್ಯವಸ್ಥೆ ಇದೆ. ಹಾಗೆನೇ ಹಿಂದುತ್ವದ ಶಾಸಕರ ಅಧ್ಯಕ್ಷತೆಯ ದೇವಸ್ಥಾನದಲ್ಲೂ ಅದೆ ನಡೆಯುತ್ತಿದೆ.
ಹಿಂದೂ ಸಮಾಜಕ್ಕೆ ತೊಂದರೆ ಇಲ್ಲ ಅಂತಾ ಹೇಳೋದಿಲ್ಲ ಬಾಹ್ಯ ಶಕ್ತಿಗಳಿಂದ ಹಿಂದೂ ಸಮಾಜಕ್ಕೆ ಖಂಡಿತ ತೊಂದರೆಯಿದೆ. ಕೇರಳ, ಮಲ್ಲಾಪುರಂನಲ್ಲಿ ಮತಾಂತರ, ಭಯೋತ್ಪಾದನೆ ಯಾಕೆ ಆಯ್ತು ಅಂತಾ ಕೇಳಿದ್ರೆ, ಜಾತಿಯ, ಸ್ಪೃಶ್ಯ, ಅಸ್ಪೃಶ್ಯ ಅನ್ಯಾಯ ಅನಾಚಾರವನ್ನ ಹಿಂದುಳಿದ ವರ್ಗ ಅನುಭವಿಸಿದ ಕಾರಣದಿಂದ ಈಗಲೂ ಒಂದಷ್ಟು ಮತಾಂತರಗಳು ನಡೆಯುತ್ತೆ. ಹಿಂದುತ್ವದ ಭದ್ರಕೋಟೆಯನ್ನ ಇವರೇ ಹಾಳು ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth