ಅಸೂಯೆಗೆ ಮದ್ದಿಲ್ಲ : ಭ್ರಷ್ಟಾಚಾರ ಆರೋಪಗಳಿಗೆ ಯು.ಟಿ.ಖಾದರ್ ತಿರುಗೇಟು - Mahanayaka
5:28 PM Thursday 30 - October 2025

ಅಸೂಯೆಗೆ ಮದ್ದಿಲ್ಲ : ಭ್ರಷ್ಟಾಚಾರ ಆರೋಪಗಳಿಗೆ ಯು.ಟಿ.ಖಾದರ್ ತಿರುಗೇಟು

u t khadar
30/10/2025

ಮಂಗಳೂರು:  ಎಲ್ಲ ರೋಗಕ್ಕೂ ಮದ್ದಿದೆ. ಆದರೆ, ಅಸೂಯೆಗೆ ಮದ್ದಿಲ್ಲ  ಎಂದು ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ತಿರುಗೇಟು ನೀಡಿದ್ದಾರೆ.

ವಿಧಾನಸಭಾ ಕಾರ್ಯಾಲಯದ ಮೂಲಕ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ, ಮಾಹಿತಿ ಕೇಳುವುದಿದ್ದರೆ, ಏನಾದರೂ ಹೇಳುವುದಿದ್ದರೆ ನಾಳೆ ಕಚೇರಿಗೆ ಬಂದು ಲಿಖಿತವಾಗಿ ದೂರು ಸಲ್ಲಿಸಲಿ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

ಕಾಗೇರಿ ಅವರೂ ರಾಜಕೀಯ ವ್ಯಕ್ತಿ. ಶಾಸಕ, ಸಂಸದರಾಗಿ ಗೌರವಯುತ ಸ್ಥಾನದಲ್ಲಿದ್ದವರು. ಅವರ ಆಲೋಚನೆಗಳನ್ನು ನಾನು ಗೌರವಿಸುತ್ತೇನೆ.  ಅವರ ಆರೋಪಗಳನ್ನು ಗಮನಿಸಿದ್ದೇನೆ. ಅವರು ಎಲ್ಲೋ ಕುಳಿತು ಮಾತನಾಡಿದಂತೆ, ನನಗೆ ಮಾತನಾಡಲು ಆಗುವುದಿಲ್ಲ. ಅವರು ಹೇಳಬೇಕಾದ ವಿಚಾರಗಳನ್ನು ಲಿಖಿತವಾಗಿ ನೀಡಿದರೆ, ಅದರಲ್ಲಿ ಏನಿದೆ ಪರಿಶೀಲಿಸುತ್ತೇನೆ. ಅದರಂತೆ ವಿಧಾನಸಭೆ ಗೌರವ ಹೆಚ್ಚು ಮಾಡಲು ಕ್ರಮ ವಹಿಸುತ್ತೇನೆ. ಈ ಕುರಿತ ಸಕಾರಾತ್ಮಕ ಚರ್ಚೆಗೆ ಸಿದ್ಧ ಎಂದರು.

ಕರ್ನಾಟಕ ವಿಧಾನಸಭೆಗೆ ಈಗ ರಾಜ್ಯ ಮತ್ತು ದೇಶದಲ್ಲಿ ಮಾತ್ರವಲ್ಲ ಅಂತರರಾಷ್ಟ್ರಿಯ ಮಟ್ಟದಲ್ಲೂ ಗೌರವ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಅದಕ್ಕೆ ದೃಷ್ಟಿ ಬೀಳಬಾರದು ಎಂದು ಅವರು ಆರೋಪ ಮಾಡಿದ್ದಾರೆ. ಎಲ್ಲ ರೋಗಕ್ಕೆ ಮದ್ದು ಇದೆ. ಅಸೂಯೆಗೆ ಮದ್ದಿಲ್ಲ. ಹೊಸತಾಗಿ ಮನೆ ನಿರ್ಮಿಸುವವರು ಕಟ್ಟಡಕ್ಕೆ ದೃಷ್ಟಿ ಬೀಳಬಾರದು ಎಂದು ದೃಷ್ಟಿಬೊಂಬೆ ಕಟ್ಟುತ್ತಾರೆ. ಅವರ ಆರೋಪ ಕಟ್ಟಡದ ದೃಷ್ಟಿಬೊಂಬೆ ಇದ್ದಂತೆ ಎಂದರು.

ರಾಜಕೀಯವಾಗಿ ಹೇಳುವುದಕ್ಕೆ ನನಗೂ ಬಹಳಷ್ಟು ವಿಚಾರಗಳಿವೆ. ರಾಜಕೀಯವಾಗಿ ಅವರು ಮಾತನಾಡಬಹುದು. ಆದರೆ ನಾನು ಸಂವಿಧಾನಬದ್ಧ ಹುದ್ದೆಯಲ್ಲಿದ್ದೇನೆ. ನಾನೀಗ ಪ್ರತಿಪಕ್ಷದ ಮಿತ್ರ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ