ದಕ್ಷಿಣ ಕನ್ನಡ ಪೊಲೀಸರು ಆರೋಪಿಗಳ ಪರ ಕೆಲಸ ಮಾಡುತ್ತಿರುವುದರಲ್ಲಿ ಸಂದೇಹವಿಲ್ಲ: ಸುಜಾತಾ ಭಟ್ ನೇರ ಆರೋಪ - Mahanayaka
12:42 PM Wednesday 17 - September 2025

ದಕ್ಷಿಣ ಕನ್ನಡ ಪೊಲೀಸರು ಆರೋಪಿಗಳ ಪರ ಕೆಲಸ ಮಾಡುತ್ತಿರುವುದರಲ್ಲಿ ಸಂದೇಹವಿಲ್ಲ: ಸುಜಾತಾ ಭಟ್ ನೇರ ಆರೋಪ

ananya bhat
17/07/2025

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ನಿನ್ನೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟನೆ ಆಘಾತಕಾರಿಯಾಗಿದೆ ಎಂದು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾಗಿರುವ ಅನನ್ಯ ಭಟ್ ಅವರ ತಾಯಿ ಸುಜಾತಾ ಭಟ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.


Provided by

ತಮ್ಮ ವಕೀಲರಾದ ಮಂಜುನಾಥ್ ಎನ್. ಅವರ ಮೂಲಕ ಪ್ರಕಟಣೆ ನೀಡಿರುವ ಸುಜಾತಾ ಭಟ್,  ಸ್ಥಳೀಯ ಗುಪ್ತಚರ ಮಾಹಿತಿಯ ಪ್ರಕಾರ ಈಗ ಹೊರ ಬಂದಿರುವ ಸಾಕ್ಷಿಯು ಸಾಮೂಹಿಕವಾಗಿ ಹೂತು ಹಾಕಿರುವ ಅಸ್ಥಿ ಪಂಜರದ ಅವಶೇಷಗಳನ್ನು ಅಗೆದು ತೆಗೆದ ನಂತರ ಪರಾರಿಯಾಗುತ್ತಾನೆ ಎಂದು ಪೊಲೀಸರು ಹೇಳಿದ್ದಾರೆ. ಧರ್ಮಸ್ಥಳದೊಳಗೆ ಮೃತದೇಹವನ್ನು ವಿವಿಧ ಸ್ಥಳಗಳಲ್ಲಿ ಹೂತು ಹಾಕಲಾಗಿದೆ ಹಾಗೂ ಆ ಮೃತದೇಹಗಳನ್ನು ಹೂತು ಹಾಕಿರುವ ನಿಖರ ಸ್ಥಳಗಳು ಈ ಸಾಕ್ಷಿ ದೂರುದಾರನಿಗೆ ತಿಳಿದಿದೆ. ಅವಕಾಶ ನೀಡಿದರೆ, ಸಾಕ್ಷಿಯು ಆ ಮೃತದೇಹಗಳ ಪಳೆಯುಳಿಕೆಗಳನ್ನು ಹೊರ ತೆಗೆಯಬಹುದು ಎಂಬುದನ್ನು ಪೊಲೀಸರ ಈ ಹೇಳೀಕೆ ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.

ಜುಲೈ 3ರಂದು ದೂರು ಸಲ್ಲಿಸಿದರೂ, ಜುಲೈ 16ರವರೆಗೆ ಪೊಲೀಸರು ಸಾಕ್ಷಿ ದೂರುದಾರನನ್ನು ಕರೆತಂದು ಹೂತು ಹಾಕಿರುವ ಸ್ಥಳದಲ್ಲಿ ಅಗೆಯದಿರುವುದು ಅಚ್ಚರಿ ತಂದಿದೆ. ಈ ರೀತಿ ವಿಳಂಬ ಮಾಡುವ ಮೂಲಕ ಪೊಲೀಸರು ಸ್ವತಃ ಆರೋಪಿಗಳಿಗೆ ಮೃತದೇಹಗಳನ್ನು ಪತ್ತೆ ಹಚ್ಚಲು ಮತ್ತು ಅವಶೇಷಗಳನ್ನು ಹೊರ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದಾರೆಯೇ ಎಂಬ ಶಂಕೆ ಮೂಡುತ್ತದೆ. ದಕ್ಷಿಣ ಕನ್ನಡ ಪೊಲೀಸರು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸುಜಾತಾ ಭಟ್ ಹಾಗೂ ವಕೀಲರಾದ ಮಂಜುನಾಥ್ ನೇರ ಆರೋಪ ಮಾಡಿದ್ದಾರೆ.

ಸಾಕ್ಷಿಗೆ ಪರಾರಿಯಾಗುವ ಉದ್ದೇಶವಿದ್ದಿದ್ದರೆ ಆತ ಮೃತದೇಹಗಳನ್ನು ಹೊರ ತೆಗೆಯುತ್ತೇನೆ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಅವನು ಇದ್ದ ಸ್ಥಳದಲ್ಲೇ ಇರಬಹುದಿತ್ತು. ಕರ್ನಾಟಕ ಸರ್ಕಾರವು ಧರ್ಮಸ್ಥಳ ದೂರಿನ ತನಿಖೆಗೆ ಕೂಡಲೇ ಎಸ್ ಐಟಿ ರಚಿಸಬೇಕು. ಈಗ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳನ್ನು ಪ್ರಕರಣದ ತನಿಖೆಯಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದು ಅವರು ವಿನಂತಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ