ರೈಲಿನಲ್ಲಿ ಕೋಡಿಮಠದ ಸ್ವಾಮೀಜಿಯ ಚಿನ್ನಾಭರಣ ಕದ್ದಿದ್ದ ಕಳ್ಳ 7 ವರ್ಷಗಳ ನಂತರ ಬಂಧನ!

ಬೆಂಗಳೂರು: ಕೋಡಿಮಠದ ಶ್ರೀ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಚಿನ್ನಾಭರಣ ಕಳವು ಮಾಡಿದ್ದ ಕಳ್ಳನನ್ನು ಪೊಲೀಸರು 7 ವರ್ಷಗಳ ನಂತರ ಬಂಧಿಸಿದ್ದಾರೆ.
ಉತ್ತರಾಖಂಡ್ ನ ಜಿತೇಂದ್ರ ಕುಮಾರ್ ಚಾವ್ಹಾ (37) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 22.75 ಲಕ್ಷ ರೂ. ಮೌಲ್ಯದ 281 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
2018ರ ಜೂನ್ 11ರಂದು ಸ್ವಾಮೀಜಿ ಕೋಡಿಮಠದ ಬಾಗಲಕೋಟೆಯಿಂದ ಅರಸೀಕೆರೆಗೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಪ್ರಯಾಣಿಸುತ್ತಾ ಸ್ವಾಮೀಜಿ, ಚಿನ್ನಾಭರಣ ಹಾಗೂ ಹಣವಿದ್ದ ಬ್ಯಾಗ್ ನ್ನು ತಲೆಯ ಅಡಿಗಿಟ್ಟು ನಿದ್ದೆಗೆ ಜಾರಿದ್ದರು. ತಡರಾತ್ರಿ ಎಚ್ಚರವಾದಾಗ ಬ್ಯಾಗ್ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಶ್ರೀಗಳು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು.
2025 ಫೆಬ್ರವರಿ 8 ರಂದು ಉಡುಪಿಯಿಂದ ಬೆಂಗಳೂರಿಗೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರೀತಮ್ ಕುಲಕರ್ಣಿ ಎಂಬವರ ಚಿನ್ನಾಭರಣವಿದ್ದ 2 ಬ್ಯಾಗ್ ಗಳು ಕೂಡ ಇದೇ ರೀತಿಯಾಗಿ ಕಳವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ವೇಳೆ ಆರೋಪಿ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ 2018ರಲ್ಲಿ ಕೋಡಿಮಠದ ಶ್ರೀಗಳ ಚಿನ್ನಾಭರಣ ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಭವಿಷ್ಯವಾಣಿಗಳ ಮೂಲಕ ಮುಂದೇನಾಗುತ್ತದೆ ಎನ್ನುವುದನ್ನು ಹೇಳುವುದರಲ್ಲಿ ಕೋಡಿಶ್ರೀಗಳು ಬಹಳ ಫೇಮಸ್ ಆಗಿದ್ದಾರೆ. ದೇಶ, ವಿದೇಶ, ರಾಜಕೀಯ, ದುರಂತ, ಹವಾಮಾನಗಳ ಬಗ್ಗೆ ಕೋಡಿ ಶ್ರೀಗಳು ಭವಿಷ್ಯ ಹೇಳುತ್ತಿರುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: