ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗೆ ನೂತನ ಹಿಂದಿ ಹೆಸರು: ಕೇರಳ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗೆ ಭಾರತೀಯ ನ್ಯಾಯ ಸುರಕ್ಷಾ ಸಂಹಿತಾ, ಭಾರತೀಯ ನ್ಯಾಯ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಹಿಂದಿ ಹೆಸರು ನೀಡಿರುವುದನ್ನು ಪ್ರಶ್ನಿಸಿ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆಯಾಗಿದೆ. ಕೇಂದ್ರ ಸರಕಾರದ ಕ್ರಮವು ‘ಭಾಷಾ ಸಾಮ್ರಾಜ್ಯಶಾಹಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎ.ಜೆ.ದೇಸಾಯಿ ಮತ್ತು ನ್ಯಾ.ವಿ.ಜಿ.ಅರುಣ ಅವರ ವಿಭಾಗೀಯ ಪೀಠವು ಬುಧವಾರದಿಂದ ಅರ್ಜಿಯ ವಿಚಾರಣೆಯನ್ನು ಆರಂಭಿಸಿದೆ.
ಕಾನೂನುಗಳಿಗೆ ಹಿಂದಿ/ಸಂಸ್ಕೃತ ಹೆಸರುಗಳನ್ನು ನೀಡಿರುವ ಕೇಂದ್ರದ ಕ್ರಮ ಅಧಿಕಾರಬಾಹಿರವಾಗಿದೆ ಎಂದು ಘೋಷಿಸುವಂತೆ, ಮೂರು ಕಾನೂನುಗಳಿಗೆ ಇಂಗ್ಲಿಷ್‌ನಲ್ಲಿ ನಾಮಕರಣ ಮಾಡಲು ನಿರ್ದೇಶಿಸುವಂತೆ ಮತ್ತು ಸಂಸತ್ತು ಕಾಯ್ದೆಗಳಿಗೆ ಇಂಗ್ಲಿಷ್ ಹೊರತುಪಡಿಸಿ ಬೇರೆ ಯಾವುದೇ ಭಾಷೆಯಲ್ಲಿ ಹೆಸರುಗಳನ್ನು ನೀಡುವಂತಿಲ್ಲ ಎಂದು ಘೋಷಿಸುವಂತೆ ನ್ಯಾಯವಾದಿ ಪಿ.ವಿ. ಜೀವೇಶ ಎಂಬವರು ನ್ಯಾಯಾಲಯವನ್ನು ಕೋರಿದ್ದಾರೆ.
ಕೇಂದ್ರ ಸರಕಾರದ ಕ್ರಮವು ‘ಭಾಷಾ ಸಾಮ್ರಾಜ್ಯಶಾಹಿ ’ ಎಂದು ಬಣ್ಣಿಸಿರುವ ಅರ್ಜಿದಾರರು ಯಾವುದೇ ಒಂದು ಭಾಷೆಯ ಪ್ರಾಬಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಭಾಷೆ ಆಧಾರಿತ ಉದ್ವಿಗ್ನತೆಗಳಿಗೆ ಕಾರಣವಾಗುತ್ತದೆ ಮತ್ತು ದೇಶದ ಏಕತೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಪ್ರತಿಪಾದಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth