‘ರೀಲ್ಸ್' ಮಾಡಲು ಹೋಗಿ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಬಿಜೆಪಿ ಮುಖಂಡನ ಪುತ್ರ! - Mahanayaka

‘ರೀಲ್ಸ್’ ಮಾಡಲು ಹೋಗಿ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಬಿಜೆಪಿ ಮುಖಂಡನ ಪುತ್ರ!

action brake reels
21/03/2026

ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಯಾಗಲು ‘ರೀಲ್ಸ್’ ಮಾಡಲು ಹೋಗಿ ಕರ್ನಾಟಕದ ಬಿಜೆಪಿ ಮುಖಂಡರೊಬ್ಬರ 15 ವರ್ಷದ ಮಗ ಮೃತಪಟ್ಟಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ–ಧಾರವಾಡ ಭಾಗದ ಪ್ರಭಾವಿ ಬಿಜೆಪಿ ಮುಖಂಡ ವೀರಭದ್ರಪ್ಪ ಸಂಗಲದ ಅವರ ಪುತ್ರ ನಮೀಶ್ ಸಂಗಲದ ಮೃತ ದುರ್ದೈವಿ. ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಶ್, ಉಗಾದಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮನೆಗೆ ಬಂದಿದ್ದನು. ಮಾರ್ಚ್ 19ರಂದು ಸಂಜೆ ಹುಬ್ಬಳ್ಳಿಯ ಉಣಕಲ್ ಪ್ರದೇಶದ ಶೇಜವಾಡಕರ್ ಲೇಔಟ್ ಬಳಿ ಸ್ನೇಹಿತರೊಂದಿಗೆ ಸೇರಿ ರೀಲ್ಸ್ ಚಿತ್ರೀಕರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ನಮೀಶ್ ಮತ್ತು ಆತನ ಸ್ನೇಹಿತರು ‘ಆಕ್ಷನ್ ಬ್ರೇಕ್’ ಎಂಬ ಅಪಾಯಕಾರಿ ಸ್ಟಂಟ್ ರೀಲ್ ಮಾಡಲು ಯೋಜಿಸಿದ್ದರು. ಇದರಲ್ಲಿ ಒಂದು ಕಡೆಯಿಂದ ಆಡಿ Q7 ಕಾರು ಮತ್ತು ಮತ್ತೊಂದು ಕಡೆಯಿಂದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ವೇಗವಾಗಿ ಬಂದು, ಕೊನೆಯ ಕ್ಷಣದಲ್ಲಿ ಬ್ರೇಕ್ ಹಾಕಿ ಪಕ್ಕಕ್ಕೆ ಸರಿಯಬೇಕಿತ್ತು.

ಸಂತೋಷ್ ನಾಗರಾಜ್ ರಾಯ್ಕರ್ ಎಂಬುವವರು ಆಡಿ ಕಾರನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ನಮೀಶ್ ಅವರ ಸ್ಕೂಟರ್‌ ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಮೀಶ್ ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ನಮೀಶ್ ತಂದೆ ವೀರಭದ್ರಪ್ಪ ಅವರು ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿ ಪೊಲೀಸರು ಕಾರು ಚಾಲಕ ಸಂತೋಷ್ ರಾಯ್ಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105ರ ಅಡಿಯಲ್ಲಿ ‘ನರಹತ್ಯೆ’ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಯುವಜನತೆ ಸಾಮಾಜಿಕ ಜಾಲತಾಣದ ವ್ಯಾಮೋಹಕ್ಕೆ ಬಿದ್ದು ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡಬೇಡಿ ಎಂದು ಪೊಲೀಸರು ಮತ್ತು ಸಾರ್ವಜನಿಕರು ಮನವಿ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ