ಶಿವಮೊಗ್ಗ: ನೀರಾನೆ ದಾಳಿಗೆ ತುತ್ತಾಗಿದ್ದ ಪಶುವೈದ್ಯೆ ಸಾವು; ಅರಣ್ಯ ಸಚಿವರಿಂದ ತನಿಖೆಗೆ ಆದೇಶ - Mahanayaka

ಶಿವಮೊಗ್ಗ: ನೀರಾನೆ ದಾಳಿಗೆ ತುತ್ತಾಗಿದ್ದ ಪಶುವೈದ್ಯೆ ಸಾವು; ಅರಣ್ಯ ಸಚಿವರಿಂದ ತನಿಖೆಗೆ ಆದೇಶ

samiksha reddy
20/03/2026

ಶಿವಮೊಗ್ಗ: ಜಿಲ್ಲೆಯ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿಯಲ್ಲಿ ಗುರುವಾರ ತಡರಾತ್ರಿ ನೀರಾನೆ (Hippopotamus) ದಾಳಿಗೆ ಒಳಗಾಗಿದ್ದ ತರಬೇತಿ ನಿರತ ಪಶುವೈದ್ಯೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ.

ಮೃತರನ್ನು ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ತ್ಯಾವರೆಕೊಪ್ಪ ಸಫಾರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತರಬೇತಿ ನಿರತ ಪಶುವೈದ್ಯಾಧಿಕಾರಿಯಾಗಿ ಸೇವೆಗೆ ಸೇರಿದ್ದರು.

ಗುರುವಾರ ರಾತ್ರಿ ಸುಮಾರು 10:30ಕ್ಕೆ ಸಫಾರಿಯ ಆಸ್ಪತ್ರೆಯಲ್ಲಿ ಪಕ್ಷಿಯೊಂದಕ್ಕೆ ಚಿಕಿತ್ಸೆ ನೀಡಿದ್ದ ಸಮೀಕ್ಷಾ, ನಂತರ ರಾತ್ರಿ 11:45ರ ಸುಮಾರಿಗೆ ಗರ್ಭಿಣಿ ನೀರಾನೆಯ ಆರೋಗ್ಯ ತಪಾಸಣೆಗೆ ಮುಂದಾಗಿದ್ದರು. ಇನ್ಫ್ರಾರೆಡ್ ಥರ್ಮೋಗ್ರಫಿ (Thermal Camera) ಮೂಲಕ ನೀರಾನೆಯ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಅವರು ಅದರ ಆವರಣದ (Enclosure) ಒಳಗೆ ಹೋದಾಗ, ಪ್ರಾಣಿಯು ಹಠಾತ್ತಾಗಿ ಅವರ ಮೇಲೆ ದಾಳಿ ಮಾಡಿದೆ.

ದಾಳಿಯಿಂದ ಸಮೀಕ್ಷಾ ಅವರ ಲಿವರ್‌ ಗೆ ತೀವ್ರ ಪೆಟ್ಟು ಬಿದ್ದಿತ್ತು ಹಾಗೂ ಅತಿಯಾದ ರಕ್ತಸ್ರಾವವಾಗಿತ್ತು. ತಕ್ಷಣವೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತಾದರೂ, ಶುಕ್ರವಾರ ಬೆಳಿಗ್ಗೆ 6:30ರ ಸುಮಾರಿಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.

ಇನ್ನೂ ಘಟನೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತೀವ್ರ ಸಂತಾಪ ಸೂಚಿಸಿದ್ದಾರೆ. “ಇದು ಅತ್ಯಂತ ದುರದೃಷ್ಟಕರ ಘಟನೆ. ಪ್ರತಿಯೊಂದು ಜೀವವೂ ಅಮೂಲ್ಯವಾದುದು. ಮೃತ ವೈದ್ಯರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ,” ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ 7 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಹಿರಿಯ ಪಶುವೈದ್ಯರು ಮತ್ತು ಅರಣ್ಯಾಧಿಕಾರಿಗಳ ತಂಡಕ್ಕೆ ಸಚಿವರು ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ನಿಯಮಾನುಸಾರ ತಕ್ಷಣವೇ ಪರಿಹಾರ ಒದಗಿಸಲು ಸೂಚಿಸಿದ್ದಾರೆ.  ಜೊತೆಗೆ ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ಗಳನ್ನು (SOP) ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸಮೀಕ್ಷಾ ರೆಡ್ಡಿ ಅವರು ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಸಕಲವಾರದ ಉದ್ಯಮಿ ಧ್ರುವ ಕುಮಾರ್ ಮತ್ತು ಶೈಲಜಾ ದಂಪತಿಯ ಏಕೈಕ ಪುತ್ರಿಯಾಗಿದ್ದರು. ಮಗಳ ಅಕಾಲಿಕ ಮರಣದಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ