ಭೀಕರ ಅಪಘಾತ: ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ರಿಸರ್ವ್ ಸಬ್ ಇನ್‌'ಸ್ಪೆಕ್ಟರ್‌ ಗಳ ದುರ್ಮರಣ - Mahanayaka

ಭೀಕರ ಅಪಘಾತ: ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ರಿಸರ್ವ್ ಸಬ್ ಇನ್‌’ಸ್ಪೆಕ್ಟರ್‌ ಗಳ ದುರ್ಮರಣ

car accident
15/03/2026

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ರಿಸರ್ವ್ ಸಬ್ ಇನ್‌ ಸ್ಪೆಕ್ಟರ್‌ ಗಳು (RSI) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಿಂದ ಬಳ್ಳಾರಿಗೆ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಐವರು ಸಬ್ ಇನ್‌ಸ್ಪೆಕ್ಟರ್‌ ಗಳು ಒಂದೇ ಕಾರಿನಲ್ಲಿ ತೆರಳುತ್ತಿದ್ದರು. ಇಂದು ಬೆಳಿಗ್ಗೆ ಸುಮಾರು 7 ಗಂಟೆಯ ವೇಳೆಗೆ ಹೆಗ್ಗೆರೆ ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು, ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸುಮಾರು 300 ಮೀಟರ್‌ಗಳಷ್ಟು ದೂರ ಲಾರಿಯೊಂದಿಗೆ ಎಳೆದೊಯ್ಯಲ್ಪಟ್ಟಿದೆ ಎನ್ನಲಾಗಿದೆ.

ಅಪಘಾತದಲ್ಲಿ ಅಮರೇಶ್, ಮಂಜುನಾಥ್ ಮತ್ತು ಸಚಿನ್ ಎಂಬ ಮೂವರು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ಇಬ್ಬರಾದ ಲಕ್ಷ್ಮಣ್ ಮತ್ತು ಈಶ್ವರ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೊದಲು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹಿರಿಯೂರು ಡಿವೈಎಸ್‌ಪಿ ಶಿವಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಗೆಳೆಯನ ಮದುವೆಗೆಂದು ಸಂಭ್ರಮದಿಂದ ಹೊರಟಿದ್ದ ಯುವ ಅಧಿಕಾರಿಗಳ ಸಾವು ಪೊಲೀಸ್ ಇಲಾಖೆಯಲ್ಲಿ ಮತ್ತು ಕುಟುಂಬದವರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ