ವಲಸೆ ಕಾರ್ಮಿಕನ ಗುಂಪು ಹತ್ಯೆ ಪ್ರಕರಣದ ತನಿಖೆ ಎಸ್.ಐ.ಟಿ.ಗೆ ವಹಿಸಿ: ಸದಾಶಿವ ಪಡುಬಿದ್ರಿ ಒತ್ತಾಯ

ಮಂಗಳೂರು: ವಾಮಂಜೂರು ಕುಡುಪು ಬಳಿ ಕೇರಳ ಮೂಲದ ಅಮಾಯಕ ವಲಸೆ ಕಾರ್ಮಿಕನನ್ನು ಆತನ ಧರ್ಮದ ಹಿನ್ನಲೆಯಲ್ಲಿ ಮತಾಂಧರು ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವ ಅಮಾನವೀಯ, ಅನಾಗರೀಕ ಕೃತ್ಯವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ -ದ. ಕ. ಜಿಲ್ಲಾ ಸಮಿತಿಯು ಕಟುವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಸಂಚಾಲಕರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ –ದ. ಕ. ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ವಲಸೆ ಕಾರ್ಮಿಕನ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಶಾಂತಿ ಪ್ರಿಯ ಮಂಗಳೂರು ಜನತೆಯಲ್ಲಿ ಈ ಘಟನೆಯು ಆತಂಕವನ್ನು ಹುಟ್ಟಿಸಿದ್ದು, ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಹೊಟ್ಟೆಪಾಡಿಗಾಗಿ ಇಲ್ಲಿಗೆ ಕೆಲಸ ಹುಡುಕಿಕೊಂಡು ದೇಶದ ವಿವಿಧ ರಾಜ್ಯಗಳಿಂದ ಹಲವಾರು ಕಾರ್ಮಿಕರು ಬರುತ್ತಿದ್ದು, ಕೋಮುವಾದಿಗಳ ಈ ಕೃತ್ಯದಿಂದಾಗಿ ಮುಂದಿನ ದಿನಗಳಲ್ಲಿ ಕಾರ್ಮಿಕರು ಮಂಗಳೂರಿಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ಉದ್ಭವವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕುಡುಪುವಿನ ಗುಂಪು ಹತ್ಯೆಯ ಬಗ್ಗೆ ಸ್ಥಳೀಯವಾಗಿ ಹಾಗೂ ಸಾರ್ವಜನಿಕ ವಲಯದಲ್ಲಿ ಹಲವಾರು ಗುಮಾನಿಯಿದ್ದರೂ, ಪೊಲೀಸ್ ಇಲಾಖೆ ಮಾತ್ರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಆರಂಭದಿಂದಲೇ ತನಿಖೆಯಲ್ಲಿ ಲೋಪ ಎಸಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಈ ಗುಂಪು ಹಲ್ಲೆ ಹಾಗೂ ಹತ್ಯೆಯ ಹಿಂದೆ ಸ್ಥಳೀಯ ಪ್ರಭಾವಿ ನಾಯಕರಿರುವ ಬಗ್ಗೆ ಈಗಾಗಲೇ ಜನರಾಡಿಕೊಳ್ಳುತ್ತಿದ್ದು, ಪೊಲೀಸರು ಅವರನ್ನು ಈ ಪ್ರಕರಣದಿಂದ ರಕ್ಷಿಸುವ ಹುನ್ನಾರ ನಡೆಸಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ ಎಂದಿದ್ದಾರೆ.
ಈ ಗುಂಪು ಹತ್ಯೆಯಲ್ಲಿ ಭಾಗಿಯಾದವರೆಲ್ಲರೂ ಕೋಮುವಾದಿ ಮನಸ್ಥಿತಿಯವರಾಗಿದ್ದು, ಅವರಿಗೆ ಕೋಮುವಾದಿ ರಾಜಕೀಯ ಪ್ರಭಾವಿ ನಾಯಕರ ಬೆಂಬಲವಿರುವ ಕಾರಣ ಹಾಗೂ ಈ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿಯೇ ಸ್ಥಳೀಯ ಪೊಲೀಸರು ಸಾಕಷ್ಟು ಲೋಪ ಎಸಗಿರುವ ಕಾರಣದಿಂದಾಗಿ ಸರಿಯಾದ ದಿಕ್ಕಿನಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆದು, ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ತನಿಖಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸುವ ಸಾಧ್ಯತೆ ತೀರಾ ಕಡಿಮೆ. ಆದುದರಿಂದ ರಾಜ್ಯ ಸರಕಾರವು ಈ ಗುಂಪು ಹಲ್ಲೆ ಹಾಗೂ ಹತ್ಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇದರ ತನಿಖೆಗಾಗಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ “ವಿಶೇಷ ತನಿಖಾ ತಂಡ “(ಎಸ್.ಐ. ಟಿ.)ವನ್ನು ರಚಿಸಿ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.
ಅಲ್ಲದೆ ಮೃತರ ಕುಟುಂಬದ ವಾರಿಸುದಾರರಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಧನವನ್ನು ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಮಂಗಳೂರು ಅಥವಾ ಕರ್ನಾಟಕದ ಯಾವುದೇ ಭಾಗದಲ್ಲಿಯೂ ಇಂತಹ ಅಮಾನವೀಯ ಘಟನೆ ಮರುಕಳಿಸದಂತೆ ವಿಶೇಷ ನಿಗಾ ವಹಿಸುವಂತೆ ಪೊಲೀಸು ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: