ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರೋ ಮರಗಿಡ-ರಸ್ತೆ ಕಾಣದೆ ಹೊರನಾಡು ಭಕ್ತರ ಕಾರುಗಳ ಅಪಘಾತ....! - Mahanayaka

ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರೋ ಮರಗಿಡ–ರಸ್ತೆ ಕಾಣದೆ ಹೊರನಾಡು ಭಕ್ತರ ಕಾರುಗಳ ಅಪಘಾತ….!

14/10/2023


Provided by

ಚಿಕ್ಕಮಗಳೂರು: ರಸ್ತೆಯ ಇಕ್ಕೆಲಗಳ ಮರಗಿಡಗಳು ಹುಲುಸಾಗಿ ಬೆಳೆದಿದ್ದು ಅವುಗಳನ್ನ ಕಡಿಯದ ಹಿನ್ನೆಲೆ ರಸ್ತೆ ಸರಿಯಾಗಿ ಕಾಣದೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಬಳಿ ನಡೆದಿದೆ.

ಲೋಕೋಪಯೋಗಿ ಇಲಾಖೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ–ಘಂಟೆಗಳನ್ನ ಕಡಿಯದ ಹಿನ್ನೆಲೆ ರಸ್ತೆ ಕಾಣದೆ ಮೇಲಿಂದ ಮೇಲೆ ಅಪಘಾತಗಳಾಗ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಿರುವಿನಲ್ಲಿ ರಸ್ತೆ ಸೂಕ್ತವಾಗಿ ಕಾಣಿಸದೆ ಹೊರನಾಡಿಗೆ ಹೋಗುತ್ತಿದ್ದ ಹಾಗೂ ಹೊರನಾಡಿನಿಂದ ಬರುತ್ತಿದ್ದ ಎರಡು ಕಾರುಗಳು ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಎರಡು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಳಸ ತಾಲೂಕಿನ ಅನ್ನಪೂರ್ಣೇಶ್ವರಿ ದರ್ಶನಕ್ಕೆ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಶೃಂಗೇರಿ ಶಾರದಾಂಬೆ ದರ್ಶನ ಮುಗಿಸಿಕೊಂಡು ಹೊರನಾಡಿಗೆ ಬರುವವರು ಬೇರೆ ಮಾರ್ಗ ಅನುಸರಿಸುತ್ತಾರೆ. ಆದ್ರೆ, ಹೊರನಾಡಿಗಷ್ಟೆ ಬರುವವರು ಹೆಚ್ಚಾಗಿ ಕೊಟ್ಟಿಗೆಹಾರದಿಂದ ಜಾವಳಿ-ಹಿರೇಬೈಲು-ಕಳಸ ಮೂಲಕ ಹೊರನಾಡು ತಲುಪುತ್ತಾರೆ. ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ಕೊಟ್ಟಿಗೆಹಾರಕ್ಕೆ ಬಂದು ಜಾವಳಿ-ಕೆಳಗೂರು-ಹಿರೇಬೈಲು-ಕಳಸದಿಂದ ಹೊರನಾಡಿಗೆ ಹೋಗುತ್ತಾರೆ.

ಆದರೆ, ಕೊಟ್ಟಿಗೆಹಾರದಿಂದ ಕಳಸದವರೆಗೂ ಹಾವು–ಬಳುಕಿನ ಮೈಕಟ್ಟಿನ ಗಾಡ್ ಸೆಕ್ಷನ್ ರಸ್ತೆಯಿದ್ದು ರಸ್ತೆ ಇಕ್ಕೆಲಗಳ ಮರಗಿಡಗಳು ಹುಲುಸಾಗಿ ಬೆಳೆದು ನಿಂತಿದೆ. ರಸ್ತೆ ಸಮರ್ಪಕವಾಗಿ ಕಾಣಿಸಿದೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸ್ಥಳೀಯರು ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

ಇದೀಗ, ನವರಾತ್ರಿಯ ಸಮಯ ನಿತ್ಯ ಹಗಲು–ರಾತ್ರಿ ಎನ್ನದೆ ನೂರಾರು ವಾಹನಗಳ ಓಡಾಟವಿರುತ್ತೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಬದಿಯ ಮರಗಿಡಗಳಲ್ಲಿ ಹುಲುಸಾಗಿ ಬೆಳೆದಿರುವ ಜಂಗಲ್‍ ಗಳನ್ನ ಕಡಿಸಬೇಕಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಈ ರೀತಿಯ ಅಪಘಾತಗಳು ಹೆಚ್ಚಾದರೂ ಆಗಬಹುದು. ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ವಾಹನ ಸವಾರರ ಜಗಳ, ಟ್ರಾಫಿಕ್ ಕ್ಲಿಯರ್ ಮಾಡೋದೆ ಒಂದು ಕೆಲಸವಾಗೋದು ಖಂಡಿತ.

ಹಾಗಾಗಿ, ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಪ್ರವಾಸಿ ಹಾಗೂ ಭಕ್ತರ ವಾಹನಳಿಗೆ ಯಾವುದೇ ತೊಂದರೆಯಾಗಂತೆ ಮರಗಿಡಗಳನ್ನ ತೆರವು ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ