ಧ್ರುವನಾರಾಯಣ್ ಅವರ ಸ್ಥಾನವನ್ನು ಯಾರೂ ಕೂಡ ದಿಢೀರನೆ ತುಂಬಲು ಸಾಧ್ಯವಿಲ್ಲ: ಅಕ್ಕ ಐಎಎಸ್ ನ ಮುಖ್ಯಸ್ಥರಾದ ಡಾ.ಶಿವಕುಮಾರ್ ಹೇಳಿಕೆ
- ಭಾರತೀಯ ವಿದ್ಯಾರ್ಥಿ ಸಂಘ—BVS ನಿಂದ ಧ್ರುವನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಭೆ
ಮೈಸೂರು: ಧ್ರುವನಾರಾಯಣ್ ಅವರ ಸಾವು ಬಹಳ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ಅಷ್ಟು ದೊಡ್ಡ ವ್ಯಕ್ತಿಯ ಜಾಗವನ್ನು ದಿಢೀರನೆ ಯಾರೂ ಕೂಡ ತುಂಬಲು ಸಾಧ್ಯವಿಲ್ಲ ಎಂದು ಅಕ್ಕ ಐಎಎಸ್ ನ ಮುಖ್ಯಸ್ಥರಾದ ಡಾ.ಶಿವಕುಮಾರ್ ಅವರು ಹೇಳಿದರು.

ಭಾರತೀಯ ವಿದ್ಯಾರ್ಥಿ ಸಂಘ—BVS ಮೈಸೂರು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸಂಸದರಾಗಿದ್ದ ಆರ್.ಧ್ರುವನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಡಾ.ಶಿವಕುಮಾರ್ ಮಾತನಾಡುತ್ತಿದ್ದರು.

ಧ್ರುವನಾರಾಯಣ್ ಅವರು ಚಾಮರಾಜನಗರ ಹಾಗೂ ಮೈಸೂರು ಭಾಗಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿರುವ ಕ್ರಾಂತಿ ಬಹಳ ದೊಡ್ಡದು. ಚಾಮರಾಜನಗರಕ್ಕೆ ಇಂಜಿನಿಯರಿಂಗ್ ಕಾಲೇಜು ಬಂತು, ಮೆಡಿಕಲ್ ಕಾಲೇಜು ಬಂತು, ಹತ್ತಾರು ಹಾಸ್ಟೆಲ್ ಗಳು ಬಂತು. ಈ ರೀತಿ ಬಹಳಷ್ಟು ಸೌಕರ್ಯಗಳನ್ನು ಧ್ರುವನಾರಾಯಣ್ ಅವರು ಮಾಡಿದ್ರು. ಅವರು ಬಹಳ ಸಂಭಾವಿತ ವ್ಯಕ್ತಿಯಾಗಿದ್ದರು. ಇತ್ತೀಚಿನ ಐದಾರು ವರ್ಷಗಳಿಂದ ಭಾರತೀಯ ವಿದ್ಯಾರ್ಥಿ ಸಂಘಕ್ಕೆ ಕೂಡ ಧ್ರುವನಾರಾಯಣ್ ಬಹಳಷ್ಟು ಬೆಂಬಲ, ಸಹಕಾರ ನೀಡಿದ್ದರು. ವಿದ್ಯಾರ್ಥಿಗಳ ಬೆನ್ನು ತಟ್ಟುವ ಕೆಲಸ ಮಾಡಿದ್ದರು. ಅದಕ್ಕಾಗಿ ನಾನು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಧ್ರುವನಾರಾಯಣ್ ಅವರ ಸಾವು ಬಹಳ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ಅಷ್ಟು ದೊಡ್ಡ ವ್ಯಕ್ತಿಯ ಜಾಗವನ್ನು ದಿಢೀರನೆ ಯಾರೂ ಕೂಡ ತುಂಬಲು ಸಾಧ್ಯವಿಲ್ಲ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ, ಧ್ರುವನಾರಾಯಣ್ ಅವರ ಚೇತನಕ್ಕೆ ಗೌತಮ ಬುದ್ಧರು ಸುಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಕನ್ನಡ ನಾಡಿನ ಖ್ಯಾತ ಸಾಹಿತಿಗಳಾದ ಸೋಸಲೆ ಗಂಗಾಧರ್ ಅವರು ಮಾತನಾಡಿ, ಧ್ರುವನಾರಾಯಣ್ ಅವರು ಬಹಳ ಸಂಭಾವಿತ ವ್ಯಕ್ತಿಯಾಗಿದ್ದರು. ಮಿತಭಾಷಿಯಾಗಿದ್ದರು. ಅವರು ಮಾತನಾಡುತ್ತಿರುವುದು ಕೇವಲ ಎರಡು ಮೂರು ಅಡಿಗಳಷ್ಟು ದೂರ ಕೇಳಿಸುವಷ್ಟೇ ಮಾತನಾಡುತ್ತಿದ್ದರು. ಎಂದೂ ಯಾರಿಗೂ ಕೆಟ್ಟ ಭಾಷೆ ಬಳಸುತ್ತಿರಲಿಲ್ಲ, ಎಲ್ಲ ವರ್ಗದ ಪ್ರೀತಿಯನ್ನು ಗಳಿಸಿದ್ದರು. ಅವರ ಸಾವು ನಮಗೆ ಅಪಾರವಾದ ನೋವು ತಂದಿದೆ ಎಂದರು.
ಮೈಸೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಸೋಸಲೆ ಸಿದ್ದರಾಜು ಅವರು ಮಾತನಾಡಿ, ಚಾಮರಾಜನಗರಕ್ಕೆ ಹಿಂದುಳಿದ ಹಣೆಪಟ್ಟಿ ಇತ್ತು, ಅದನ್ನು ಹೋಗಲಾಡಿಸಲು ಧ್ರುವನಾರಾಯಣ್ ಅವರು ತುಂಬಾ ಪ್ರಯತ್ನಪಟ್ಟರು. ಶೈಕ್ಷಣಿಕವಾಗಿ ಬಹಳಷ್ಟು ಸುಧಾರಣೆಗಳನ್ನು ಮಾಡಿದರು. ಕಪಿಲ ನದಿಯನ್ನು ತಂದು ರೈತರಿಗೆ ಅನುಕೂಲ ಮಾಡಿದರು. ಎಲ್ಲರ ಜೊತೆಗೆ ಚೆನ್ನಾಗಿ ಬೆರೆಯುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಪ್ರತಾಪ್ ದೊರೆ, ಎನ್.ಸಿ.ರಾಹುಲ್ , ದಿನಕರ್ ಮುಂತಾದವರು ಭಾಗವಹಿಸಿದ್ದರು. ನಾರಾಯಣಸ್ವಾಮಿ, ಸಿದ್ದೇಶ್ ಬದನವಾಳು, ಚೆನ್ನರಾಜು ಬುದ್ದ ಮಂತ್ರವನ್ನು ಪಠಿಸಿದರು.
ಖ್ಯಾತ ಜನಪದ ಗಾಯಕ ದೇವಾನಂದ ವರಪ್ರಸಾದ್ ಅವರು ಧ್ರುವನಾರಾಯಣ್ ಸಾಹೇಬರನ್ನು ಕುರಿತ ಗೀತೆಯನ್ನು ಹಾಡಿದರು. ಕಾರ್ಯಕ್ರಮ ಬಹಳ ಭಾವಪೂರ್ಣವಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























