ಐವನ್ ಡಿ ಸೋಜ ನೇತೃತ್ವದಲ್ಲಿ ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ, ಸರ್ವಧರ್ಮ ಪ್ರಾರ್ಥನೆ - Mahanayaka

ಐವನ್ ಡಿ ಸೋಜ ನೇತೃತ್ವದಲ್ಲಿ ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ, ಸರ್ವಧರ್ಮ ಪ್ರಾರ್ಥನೆ

congress
11/05/2025


Provided by

ಮಂಗಳೂರು: ಉಗ್ರವಾದ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಭಾರತೀಯ ಸೇವೆ ಜಗತ್ತಿಗೆ ನೀಡಿದೆ. ಭಾರತ ಸರಕಾರದ ದಿಟ್ಟ ನಿರ್ಧಾರಕ್ಕೆ ನಮ್ಮ ಬೆಂಬಲ ನಿರಂತರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹೇಳಿದರು.

ಶನಿವಾರ ನಗರದ ರಾಜಾಜೀ ಪಾರ್ಕ್‌ನಲ್ಲಿ ಪಹಲ್ಗಾಮ್‌ ನಲ್ಲಿ ಉಗ್ರರ ದಾಳಿಯಲ್ಲಿ ಮಡಿದ ಭಾರತೀಯರಿಗೆ ಆಯೋಜಿಸಲಾದ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಸರ್ಮಧರ್ಮ ಪ್ರಾರ್ಥನಾ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಚೊಕ್ಕಬೆಟ್ಟು ಜುಮಾ ಮಸೀದಿಯ ಇಮಾಮ್ ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ದೇಶಕ್ಕೆ ಆಪತ್ತು ಬಂದಾಗ ಧರ್ಮ ಮರೆತು ಜತೆಯಾಗಿ ನಿಲ್ಲುವ ಸಂಕಲ್ಪ ನಮ್ಮದು. ಭಾರತ ಶಕ್ತಿ ಶಾಲಿಯಾಗಿ ಉಗ್ರರನ್ನು ಮೆಟ್ಟಿನಿಂತು ವಿಶ್ವಕ್ಕೆ ಬೆಳಕಾಗಲಿ, ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಬೇಕೆಂಬುವುದು ಉಗ್ರರ ಉದ್ದೇಶ. ನಮ್ಮ ಒಗ್ಗಟ್ಟು ಒಡೆದು ದೇಶವನ್ನು ದುರ್ಬಲಗೊಳಿಸುವುದು ಅವರ ಧೈಯ. ಆದರೆ ದೇಶಕ್ಕೆ ತೊಂದರೆ ಬಂದಾಗ ದೇಶಕ್ಕಾಗಿ ಹೋರಾಡಲು ಕರೆ ಬಂದಲ್ಲಿ ಎಲ್ಲಾ ಧರ್ಮ ಮರೆತು ಒಂದಾಗಿ ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದರು.

ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ಭಾರತ ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಸೌಹಾರ್ದತೆಯಿಂದ ಬಾಳುವ ದೇಶ. ಮಾನವೀಯತೆ ಮರೆತು ಭಯೋತ್ಪಾದಕರು ಅಮಾಯಕರನ್ನು ಹತ್ಯೆ ಮಾಡಿದ ಕೃತ್ಯ ಖಂಡನೀಯ ಎಂದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಮಾತನಾಡಿ,  ಭಾರತದ ಎಲ್ಲರೂ ಒಂದಾಗಿ ಪ್ರಾರ್ಥಿಸಿದಾಗ ಉಗ್ರರ ವಿರುದ್ಧ ಹೋರಾಡುವ ಸೈನಿಕರಿಗೆ ಮತ್ತಷ್ಟು ಶಕ್ತಿ ಹಾಗೂ ಧೈರ್ಯ ಪ್ರಾಪ್ತಿಯಾಗುತ್ತದೆ ಎಂದರು.

ನಿಟ್ಟೆ ಪರಿಗಣಿತ ವಿವಿಯ ಸಹ ಉಪಕುಲಪತಿ ಡಾ. ಶಾಂತರಾಮ ಶೆಟ್ಟಿ ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ವಂ.ಡಾ.ಪ್ರವೀಣ್ ಮಾರ್ಟಿಸ್, ಮಾಜಿ ಮೇಯರ್‌ ಗಳಾದ ಶಶಿಧರ್ ಹೆಗ್ಡೆ, ಅಶ್ರಫ್ ಕೆ, ಭಾಸ್ಕರ್ ಕೆ., ವಕ್ಸ್ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ವಾನಿ ಆಳ್ವಾರಿಸ್, ಪ್ರಮುಖರಾದ ಅಲ್ವಿನ್ ಡಿ ಸೋಜ, ಭಗಿನಿ ಸೆಲ್ವಿನಾ ಫೆರ್ನಾಂಡಿಸ್, ಭಗಿನಿ ಜೆರಾಲ್ಡಿನ್ ಡಿಸೋಜ, ಭಗಿನಿ ಸ್ಮಿತಾ, ವಂ. ರಾಜೇಶ್ ರೊಸಾರಿಯೋ, ಜಯರಾಮ್ ಶೇಖರ್, ಕ್ಯಾ ದೀಪಕ್ ಅಡ್ಯಂತಾಯ, ಸುಭೇದ‌ ಅಪ್ಪು ಶೆಟ್ಟಿ, ಸುರೇಖ್ ಪೈ, ಭಗವಾನ್ ದಾಸ್, ಕೆ.ಸಿ. ನಾರಾಯಣ್, ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಜೊಕಿಂ ಡಿ ಸೋಜ ಮತ್ತಿತರರು ಪಾಲ್ಗೊಂಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ