‘ಹಾರ್ಮುಜ್ ಜಲಸಂಧಿಗೆ ಹೋಗಿ ನಿಮ್ಮ ತೈಲವನ್ನು ನೀವೇ ಪಡೆದುಕೊಳ್ಳಿ’ ಯುಕೆ ಸೇರಿದಂತೆ ಮಿತ್ರ ರಾಷ್ಟ್ರಗಳ ಮೇಲೆ ಟ್ರಂಪ್ ಕಿಡಿ
ವಾಷಿಂಗ್ಟನ್: ಇರಾನ್ ಜೊತೆಗಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಿತ್ರ ರಾಷ್ಟ್ರಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾರ್ಮುಜ್ ಜಲಸಂಧಿಯ (Strait of Hormuz) ಬಿಕ್ಕಟ್ಟಿನಿಂದಾಗಿ ಇಂಧನ ಕೊರತೆ ಎದುರಿಸುತ್ತಿರುವ ಬ್ರಿಟನ್ ನಂತಹ ದೇಶಗಳಿಗೆ “ನಿಮ್ಮ ತೈಲವನ್ನು ನೀವೇ ಹೋಗಿ ಪಡೆದುಕೊಳ್ಳಿ” ಎಂದು ಟ್ರಂಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕವು ಇರಾನ್ ವಿರುದ್ಧದ ಹೋರಾಟದಲ್ಲಿ “ಕಠಿಣ ಕೆಲಸಗಳನ್ನು” ಈಗಾಗಲೇ ಮುಗಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕಕ್ಕೆ ಸಹಾಯ ಮಾಡದ ದೇಶಗಳಿಗೆ ಇನ್ನು ಮುಂದೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಶೇಷವಾಗಿ ಯುನೈಟೆಡ್ ಕಿಂಗ್ ಡಮ್ (UK) ವಿರುದ್ಧ ಕಿಡಿಕಾರಿದ ಟ್ರಂಪ್, ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಬ್ರಿಟನ್ ಭಾಗವಹಿಸಲು ನಿರಾಕರಿಸಿತ್ತು. ಈಗ ಜೆಟ್ ಇಂಧನದ ಕೊರತೆ ಎದುರಾದಾಗ ಅಮೆರಿಕದ ಮೊರೆ ಹೋಗುವುದು ಸರಿಯಲ್ಲ ಎಂದು ಹೇಳಿದ್ದಾರೆ. “ಧೈರ್ಯ ತೋರಿ, ಹಾರ್ಮುಜ್ ಜಲಸಂಧಿಗೆ ಹೋಗಿ ನಿಮ್ಮ ತೈಲವನ್ನು ನೀವೇ ತೆಗೆದುಕೊಳ್ಳಿ” ಎಂದು ಅವರು ಸಲಹೆ ನೀಡಿದ್ದಾರೆ.
ಇಸ್ರೇಲ್ ಗೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡದ ಫ್ರಾನ್ಸ್ ನಡೆಯನ್ನು ಟ್ರಂಪ್ ಟೀಕಿಸಿದ್ದಾರೆ. ಫ್ರಾನ್ಸ್ ನ ಈ “ಅಸಹಕಾರ”ವನ್ನು ಅಮೆರಿಕ ನೆನಪಿಟ್ಟುಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇರಾನ್ ಯುದ್ಧದ ಕಾರಣದಿಂದಾಗಿ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರಿದೆ. ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆ ಪ್ರತಿ ಗ್ಯಾಲನ್ ಗೆ 4 ಡಾಲರ್ ದಾಟಿದೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿರುವುದು ಈ ಬಿಕ್ಕಟ್ಟಿಗೆ ಕಾರಣವಾಗಿದೆ.
ಇರಾನ್ ಕೂಡಲೇ ಸಂಧಾನಕ್ಕೆ ಬರದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ, ಇರಾನ್ ನ ವಿದ್ಯುತ್ ಸ್ಥಾವರಗಳು ಮತ್ತು ತೈಲ ಕೇಂದ್ರಗಳ ಮೇಲೆ ಭಾರೀ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಆದರೆ ಟ್ರಂಪ್ ಅವರ ಆಕ್ರೋಶಕ್ಕೆ ಎಲ್ಲಿಯೂ ಮಣ್ಣನೆ ಸಿಗದೇ ಇರುವುದು ಕಂಡು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























