ಎಕೆಎಂಎಸ್ ಬಸ್ ಮಾಲಿಕನ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ: ಕೊಲೆಗೆ ಕಾರಣ ಏನು? - Mahanayaka
8:48 PM Monday 29 - September 2025

ಎಕೆಎಂಎಸ್ ಬಸ್ ಮಾಲಿಕನ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ: ಕೊಲೆಗೆ ಕಾರಣ ಏನು?

malpe case
29/09/2025

ಉಡುಪಿ: ಎಕೆಎಂಎಸ್ ಬಸ್ ಮಾಲಿಕ, ರೌಡಿಶೀಟರ್ ಸೈಫುದ್ದೀನ್ ಅತ್ರಾಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಬಂಧಿತ ಆರೋಪಿಗಳನ್ನು ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಮಹಮ್ಮದ್ ಫೈಸಲ್ ಖಾನ್(27), ಉಡುಪಿ ಕರಂಬಳ್ಳಿ ಜನತಾ ಕಾಲೋನಿಯ ಮಹಮ್ಮದ್ ಶರೀಫ್(37), ಸುರತ್ಕಲ್ ಕೃಷ್ಣಾಪುರದ 7ನೇ ಬ್ಲಾಕ್ ನಿವಾಸಿ ಅಬ್ದುಲ್ ಶುಕೂರು(43) ಎಂದು ಗುರುತಿಸಲಾಗಿದೆ.


Provided by

ಉಡುಪಿ ಡಿವೈಎಸ್ ಪಿ ಡಿ.ಟಿ. ಪ್ರಭು ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಮಲ್ಪೆ ಎಸ್ ಐ ಅನಿಲ್ ಕುಮಾರ್ ಡಿ ಹಾಗೂ ಸಿಬ್ಬಂದಿಯ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಡ್ ನಿಂದ ತಲೆಗೆ ಹೊಡೆದಿದ್ದರು:

ಸೈಫುದ್ದೀನ್ 2 ವರ್ಷಗಳ ಹಿಂದೆ ಮಣಿಪಾಲದಲ್ಲಿ ಹೊಸ ಮನೆ ನಿರ್ಮಿಸಿದ್ದ. ಬಳಿಕ ತನ್ನ ಮಲ್ಪೆ ಕೊಡವೂರು ಸಾಲ್ಮರ ನಿವಾಸದಿಂದ ಕುಟುಂಬ ಸಮೇತವಾಗಿ ಮಣಿಪಾಲಕ್ಕೆ ಶಿಫ್ಟ್ ಆಗಿದ್ದ. ಇದೀಗ ಮತ್ತೆ ಮಲ್ಪೆ ಕೊಡವೂರು ಸಾಲ್ಮರ ನಿವಾಸಕ್ಕೆ ವಾಪಸ್ ಶಿಫ್ಟ್ ಆಗಲು ಮುಂದಾಗಿದ್ದ. ಹೀಗಾಗಿ ಮನೆಗೆ ಬೇಕಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಶುಕೂರು ಮತ್ತು ಫೈಸಲ್ ನನ್ನು ಕೊಡವೂರು ಮನೆಗೆ ಕರೆದುಕೊಂಡು ಹೋಗಿದ್ದನು. ದಾರಿ ಮಧ್ಯೆ ಶುಕೂರು ಕೂಡ ಸೇರಿಕೊಂಡಿದ್ದನು. ಮನೆಗೆ ತಲುಪುತ್ತಿದ್ದಂತೆಯೇ ಬೀಗ ತೆರೆದು ಸೈಫ್ ಒಳಕ್ಕೆ ಪ್ರವೇಶಿಸುತ್ತಿದ್ದ ವೇಳೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದರು. ಏಟಿನ ತೀವ್ರತೆಗೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸೈಫ್ ನನ್ನು ಆತನದ್ದೇ ಮನೆಯಲ್ಲಿದ್ದ ತಲವಾರಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಹೇಳಲಾಗಿದೆ.

ಹಳೆಯ ದ್ವೇಷ ಕಾರಣವಾಯ್ತಾ?

2020ರ ಫೆ.10ರಂದು ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಂಪಳ್ಳಿಯಲ್ಲಿ ನ್ಯೂಮುಂಬೈ ಹೊಟೇಲ್ ಮಾಲಿಕ ವಶಿಷ್ಠ ಯಾದವ್ ಎಂಬವರ ಕೊಲೆ ಪ್ರಕರಣದಲ್ಲಿ ಸೈಫ್ ಜೊತೆಗೆ ಶರೀಫ್ ಮತ್ತು ಶುಕೂರು ಕೂಡ ಭಾಗಿಯಾಗಿ ಜೈಲುಪಾಲಾಗಿದ್ದರು. ಶುಕೂರು ಈ ಪ್ರಕರಣದಲ್ಲಿ 4 ವರ್ಷ 8 ತಿಂಗಳು ಜೈಲಿನಲ್ಲಿದ್ದನು. ಆದ್ರೆ ಸೈಫ್ ಈ ಪ್ರಕರಣದಲ್ಲಿ ತನಗೆ ಯಾವುದೇ ಸಹಾಯ ಮಾಡಿಲ್ಲ ಎನ್ನುವ ಸಿಟ್ಟು ಶುಕೂರಿಗೆ ಇತ್ತು ಎನ್ನಲಾಗಿದೆ. ಜೊತೆಗೆ 9—10 ವರ್ಷಗಳಿಂದ  ಆರೋಪಿಗಳು ಮತ್ತು ಸೈಫ್ ಜೊತೆಗೆ ಒಡನಾಟವಿತ್ತು. ಇವರ ಮಧ್ಯೆ ಹಣಕಾಸಿನ ವಿಚಾರದಲ್ಲೂ ದ್ವೇಷ ಹುಟ್ಟಿಕೊಂಡಿತ್ತು ಎಂದು ಹೇಳಲಾಗಿದ್ದು, ಇದೇ ಕೊಲೆಗೆ ಕಾರಣವಿರಬಹುದು ಎಂದು ಹೇಳಲಾಗಿದೆ. ಪೊಲೀಸರ ತನಿಖೆಯ ನಂತರ ಹೆಚ್ಚಿನ ಮಾಹಿತಿಗಳು ಹೊರ ಬೀಳಬೇಕಿದೆ. ಸದ್ಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ