ಪಣಂಬೂರು ಬೀಚ್ ನಲ್ಲಿ ಅನೈತಿಕ ಪೊಲೀಸ್ ಗಿರಿ: ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಪಣಂಬೂರು ಬೀಚ್ ನಲ್ಲಿ ಯುವಕ ಹಾಗೂ ಯುವತಿಯ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಪಿಲಾತಬೆಟ್ಟು ನಿವಾಸಿ ಪ್ರಶಾಂತ್ ಭಂಡಾರಿ(38), ಬೆಳ್ತಂಗಡಿ ಕರಾಯ ನಿವಾಸಿ ಉಮೇಶ್(23), ಬೆಳ್ತಂಗಡಿ ಪುತ್ತಿನ ನಿವಾಸಿ ಸುಧೀರ್(26), ಬೆಳ್ತಂಗಡಿ ಮಚ್ಚಿನ ನಿವಾಸಿ ಕೀರ್ತನ್ ಪೂಜಾರಿ(20) ಬಂಧಿತ ಆರೋಪಿಗಳಾಗಿದ್ದಾರೆ.
ಬೆಂಗಳೂರಿನ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಮಲ್ಪೆಗೆ ತೆರಳುತ್ತಿದ್ದಾಗ ಪರಿಚಿತ ಯುವಕ ಸಿಕ್ಕಿದ್ದು, ಆತನೊಂದಿಗೆ ಪಣಂಬೂರು ಬೀಚ್ ಗೆ ಭೇಟಿ ನೀಡಿದ್ದೆ. ಆತನಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಬಂದಿದ್ದು, ಹೀಗಾಗಿ ಆತನನ್ನು ಅಭಿನಂದಿಸಲು ಹೋಗಿದ್ದೆ. ನಾವು ಜೊತೆಯಾಗಿದ್ದ ವೇಳೆ ಯುವಕರು ಬೈದು, ಅಡ್ಡಗಟ್ಟಿ ನಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಯುವಕ ಯುವತಿ ಜೊತೆಗಿದ್ದರೆಂದು ಆರೋಪಿಸಿ, ಯುವಕರು ಗಲಾಟೆ ನಡೆಸಿದ್ದು, ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪಣಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.