ಆಸ್ತಿ ಮಾರಾಟ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಿದ್ದ ವ್ಯಕ್ತಿಯ ಬರ್ಬರ ಹತ್ಯೆ!

ಚಿಕ್ಕಮಗಳೂರು: ಆಸ್ತಿ ಮಾರಾಟ ಮಾಡಿದ ಹಣದ ವಿಚಾರದಲ್ಲಿ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ ವ್ಯಕ್ತಿಯೋರ್ವನ ಬರ್ಬರ ಹತ್ಯೆಯಲ್ಲಿ ಕೊನೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದ ಬಾಳೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
ಮಧುಗುಂಡಿ ಗ್ರಾಮದ ವಾಸಿ ಸಂತೋಷ್ ಈತನು ರಾತ್ರಿ ಕುಡಿದ ಮತ್ತಿನಲ್ಲಿ ಆಸ್ತಿ ಮಾರಾಟ ಮಾಡಿದ ಹಣದ ವಿಚಾರದಲ್ಲಿ ಮಾತುಕತೆಗೆ ಬಂದಿದ್ದ ಕಾರ್ತಿಕ್ ನನ್ನು ಮನೆ ಒಳಗಡೆ ಮಚ್ಚಿನಿಂದ ಹಲ್ಲೆ ಮಾಡಿದ್ದು ಕಾರ್ತಿಕ್ ಎಂಬಾತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಹಲ್ಲೆ ಮಾಡುವ ಸಮಯದಲ್ಲಿ ಬಿಡಿಸಲು ಬಂದ ಸಂತೋಷ್ ನ ತಂದೆ ಬಾಸ್ಕರ ಗೌಡ (70 ವರ್ಷ) ಮತ್ತು ತಾಯಿ ಪ್ರೇಮ (52 ವರ್ಷ) ರವರಿಗೂ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ.ಕೃತ್ಯದ ಬಳಿಕ ಆರೋಪಿ ಸಂತೋಷ್ ನು ಬಾಳೂರು ಪೊಲೀಸ್ ಠಾಣೆಗೆ ತಾನಾಗಿಯೇ ಬಂದು ಶರಣಾಗಿದ್ದಾನೆ.
ಮೃತ ಕಾರ್ತಿಕ್ ಈತನು ಭಾಸ್ಕರ್ ಗೌಡ ರವರ ಜಮೀನನ್ನು ಬೆಂಗಳೂರು ಮೂಲದ ಉದ್ಯಮಿಗೆ ಮಾರಾಟ ಮಾಡಲು ವ್ಯಾಪಾರ ಮಾಡಿ ಕೊಟ್ಟಿದ್ದು ಅದರ ಮುಂಗಡ ಬಾಬ್ತು 12 ಲಕ್ಷ ಹಣ ಕೊಡಿಸಿದ್ದು, ಆ ಹಣವನ್ನು ಭಾಸ್ಕರ್ ಗೌಡ ರವರ ಮೊದಲ ಮಗ ಶಿವು ಕುಮಾರ್ ರವರು ತೆಗೆದುಕೊಂಡು ಹೋಗಿದ್ದು ಈ ವಿಚಾರದಲ್ಲಿ ಮನಸ್ತಾಪ ಗೊಂಡು ಕಾರ್ತಿಕ್ ನನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.