ಇರಾನ್ ನೀಡಿದ ಹೊಡೆತಕ್ಕೆ ತುರ್ತು ಭೂಸ್ಪರ್ಶ ಮಾಡಿದ ಅಮೆರಿಕದ ಶಕ್ತಿಯುತ ಎಫ್-35 ಯುದ್ಧ ವಿಮಾನ!
ವಾಷಿಂಗ್ಟನ್/ದುಬೈ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಕಾರ್ಯಾಚರಣೆಯ ವೇಳೆ ಅಮೆರಿಕದ ಅತ್ಯಾಧುನಿಕ ಎಫ್–35 (F–35 Lightning II) ಸ್ಟೆಲ್ತ್ ಯುದ್ಧ ವಿಮಾನವೊಂದು ಇರಾನ್‌ನ ದಾಳಿಗೆ ಸಿಲುಕಿ ತುರ್ತು ಭೂಸ್ಪರ್ಶ ಮಾಡಿದೆ.
ಇರಾನ್ ಮೇಲೆ ಯುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಇರಾನ್ ನ ಕ್ಷಿಪಣಿ ನಿರೋಧಕ ವ್ಯವಸ್ಥೆಯು ಎಫ್–35 ವಿಮಾನವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ವರದಿಯಾಗಿದೆ.
ದಾಳಿಯಿಂದಾಗಿ ವಿಮಾನಕ್ಕೆ ಹಾನಿಯಾಗಿದ್ದು, ಪೈಲಟ್ ತಕ್ಷಣವೇ ಸಮೀಪದ ಅಮೆರಿಕನ್ ವಾಯುನೆಲೆಯಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ವಿಮಾನದ ಪೈಲಟ್ ಸುರಕ್ಷಿತವಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಖಚಿತಪಡಿಸಿದ್ದಾರೆ.
ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ತಾವು ಅಮೆರಿಕದ ಅತ್ಯಾಧುನಿಕ ವಿಮಾನವನ್ನು ಹೊಡೆದು ಉರುಳಿಸಿದ್ದೇವೆ ಮತ್ತು ಅದು ಪತನಗೊಂಡಿರಬಹುದು ಎಂದು ಪ್ರತಿಪಾದಿಸಿದೆ. ಆದರೆ ಅಮೆರಿಕ ಇದನ್ನು ನಿರಾಕರಿಸಿದ್ದು, ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಎಂದು ತಿಳಿಸಿದೆ.
ಎಫ್–35 ವಿಮಾನವು ವಿಶ್ವದ ಅತ್ಯಂತ ದುಬಾರಿ ಮತ್ತು ಶಕ್ತಿಯುತ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಇದು ರೇಡಾರ್ ಗಳ ಕಣ್ಣಿಗೆ ಮಣ್ಣೆರಚುವ ‘ಸ್ಟೆಲ್ತ್’ ತಂತ್ರಜ್ಞಾನವನ್ನು ಹೊಂದಿದೆ. ಇರಾನ್ ನಂತಹ ದೇಶವು ಇಷ್ಟು ಮುಂದುವರಿದ ವಿಮಾನವನ್ನು ಪತ್ತೆಹಚ್ಚಿ ದಾಳಿ ಮಾಡಿರುವುದು ಈಗ ರಕ್ಷಣಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ಅಮೆರಿಕದ ಸೇನಾ ತನಿಖಾಧಿಕಾರಿಗಳು ಈ ತಾಂತ್ರಿಕ ವೈಫಲ್ಯ ಮತ್ತು ದಾಳಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























