ಇಂಡಿಯಾನದಲ್ಲಿ ಭಾರತೀಯ ವಿದ್ಯಾರ್ಥಿಗೆ ಚೂರಿ ಇರಿತ: “ಈ ದಾಳಿಯು ತೀವ್ರ ಆತಂಕಕಾರಿ” ಎಂದ ಅಮೆರಿಕ

ಅಮೆರಿಕದ ಇಂಡಿಯಾನಾ ರಾಜ್ಯದ ಜಿಮ್‌ವೊಂದರಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಗೆ ಚೂರಿಯಿಂದ ಇರಿದ ಘಟನೆಯ ಬಗ್ಗೆ ಯುಎಸ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ವಿದ್ಯಾರ್ಥಿಯ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಪಿ.ವರುಣ್ ರಾಜ್ ಅವರನ್ನು ಅಕ್ಟೋಬರ್ 29 ರಂದು ಜಿಮ್ ನಲ್ಲಿ ಜೋರ್ಡಾನ್ ಆಂಡ್ರೇಡ್ (24) ಎಂಬ ದುಷ್ಕರ್ಮಿ ಚಾಕುವಿನಿಂದ ಇರಿದಿದ್ದ. ಈ ದಾಳಿಯ ಉದ್ದೇಶದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ವರುಣ್ ರಾಜ್ ಶೀಘ್ರ ಗುಣಮುಖರಾಗಲಿ ಎಂದು ಅಮೆರಿಕ ಹಾರೈಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. “ಭಾರತೀಯ ಪದವಿ ವಿದ್ಯಾರ್ಥಿ ವರುಣ್ ರಾಜ್ ಪುಚಾ ಅವರ ಮೇಲೆ ನಡೆದ ಕ್ರೂರ ದಾಳಿಯ ವರದಿಗಳಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ. ಅವರು ಗಾಯಗಳಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ನಡೆಯುತ್ತಿರುವ ಈ ಪ್ರಕರಣದ ಬಗ್ಗೆ ಯಾವುದೇ ಪ್ರಶ್ನೆಗಳಿಗೆ ನಾವು ಸ್ಥಳೀಯ ಕಾನೂನು ಜಾರಿಯನ್ನು ಮುಂದೂಡುತ್ತೇವೆ” ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಎಎನ್ಐಗೆ ತಿಳಿಸಿದ್ದಾರೆ.
ಚೂರಿ ಇರಿತದ ನಂತರ ದಾಳಿಕೋರ ಆಂಡ್ರೇಡ್ ನನ್ನು ಬಂಧಿಸಲಾಗಿದ್ದು ಈತನ ಮೇಲೆ ಕೊಲೆ ಯತ್ನದ ಆರೋಪಗಳನ್ನು ಹೊರಿಸಲಾಗಿದೆ. ತನಿಖೆ ನಡೆಯುತ್ತಿದೆ.