ನಾಮಪತ್ರ ಸಲ್ಲಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವೇದವ್ಯಾಸ್ ಕಾಮತ್ ಮಂಗಳೂರು ಮಹಾನಗರ ಪಾಲಿಕೆ ಯಲ್ಲಿರುವ ಚುನಾವಣಾಧಿಕಾರಿಗೆ ಇಂದು ನಾಮಪತ್ರ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಅವರು, ಮಂಗಳೂರಿನ ನೂರಕ್ಕೂ ಮಿಕ್ಕಿ ದೇವಸ್ಥಾನ, ದೈವಸ್ಥಾನ, ಗರಡಿಗಳಲ್ಲಿ ಪೂಜೆ ಸಲ್ಲಿಸಿ ಮಗಳೂರು ನಗರ ದಕ್ಷಿಣದಲ್ಲಿ ನನ್ನ ಗೆಲುವಿಗಾಗಿ ಪ್ರಾರ್ಥಿಸಿ ಪ್ರಸಾದ ತಂದು ನನಗೆ ನೀಡಿರುವ ಎಲ್ಲಾ ಹಿರಿಯರಿಗೆ, ಮುಖಂಡರಿಗೆ ಧನ್ಯವಾದಗಳು. ಒಂದು ದಿನದ ಹಿಂದೆಯಷ್ಟೇ ಮಾಹಿತಿ ಸಿಕ್ಕಿದರೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಕಾರ್ಯಕರ್ತ ಬಂಧುಗಳಿಗೆ ವಂದನೆಗಳು.
ಕಳೆದ ಐದು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ 4000 ಕೋಟಿ ರೂ. ಮಿಕ್ಕಿ ಅನುದಾನ ತಂದು ನಮ್ಮ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ. ಇನ್ನು ಸಾಕಷ್ಟು ಅಭಿವೃದ್ಧಿ ಮಾಡಲಿದ್ದು, 2025-26 ರ ಒಳಗೆ ಮಂಗಳೂರು ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ರೂಪ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಕುದ್ರೋಳಿ ದೇವಸ್ಥಾನದಲ್ಲಿ ಪ್ರತಿ ಬಾರಿ ದೇವರಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸುವ ಸಂಪ್ರದಾಯ ಪಾಲಿಸಿದ್ದೇನೆ. ಅದೇ ರೀತಿಯಲ್ಲಿ ಕದ್ರಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ರಥಬೀದಿ ವೆಂಕಟರಮಣ ದೇವಸ್ಥಾನ, ಬಜಿಲಕೇರಿ ಮುಖ್ಯಪ್ರಾಣ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಇಂದಿನ ನಾಮಪತ್ರ ಸಲ್ಲಿಸುವಾಗ ಸೇರಿದ ಜನಸ್ತೋಮವನ್ನು ನೋಡುವಾಗ ಇದು ಗೆಲುವಿನ ನಂತರದ ವಿಜಯಯಾತ್ರೆಯಂತೆ ಕಂಗೊಳಿಸುತ್ತಿದೆ.
ರಾಜ್ಯಾಧ್ಯಕ್ಷರೂ, ನೆಚ್ಚಿನ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ವಿಜಯ ಯಾತ್ರೆಗೆ ಶುಭ ಕೋರಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಸೇರಿರುವುದಕ್ಕೆ ಸರ್ವರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಕಾಮತ್ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದರು. ಪುಷ್ಪಗಳಿಂದ ಸಿಂಗರಿಸಿದ ಜೀಪಿನಲ್ಲಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರನ್ನು ಕುದ್ರೋಳಿಯಿಂದ ಲಾಲ್ ಭಾಗ್ ತನಕ ಕರೆದೊಯ್ಯಲಾಯಿತು. ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರು ನಗರ ದಕ್ಷಿಣದಲ್ಲಿ ವೇದವ್ಯಾಸ ಕಾಮತ್ ಮಾಡಿರುವ ಅಭಿವೃದ್ಧಿಯನ್ನು ಜನಮೆಚ್ಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಪರ ವಾತಾವರಣ ಇದ್ದು, ಎಲ್ಲಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ರಾಜ್ಯದಲ್ಲಿ ನಮ್ಮ ಸರಕಾರ ನಿಚ್ಚಳ ಬಹುಮತ ಗಳಿಸಲಿದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಚೆಂಡೆ ವಾದನ, ಕಲ್ಲಡ್ಕ ಬೊಂಬೆಗಳು, ಹಾಡುಗಳು ಕಾರ್ಯಕರ್ತರ ಖುಷಿಯನ್ನು ಹೆಚ್ಚಿಸಿದವು. ವೇದವ್ಯಾಸ ಕಾಮತ್ ಅವರನ್ನು ಮೆಚ್ಚಿ ರಚಿಸಲಾದ ವಿಶೇಷ ಹಾಡಿಗೆ ಕಾರ್ಯಕರ್ತರು ಹೆಜ್ಜೆ ಹಾಕುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಅಲ್ಲಲ್ಲಿ ಉಚಿತವಾಗಿ ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು.
ನಾಮಪತ್ರ ಸಲ್ಲಿಸುವಾಗ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸಂಚಾಲಕ ನಿತಿನ್ ಕುಮಾರ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ವಕೀಲ ರವೀಂದ್ರ ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಪ್ರಮುಖರಾದ ಉಮಾನಾಥ್ ಅಮೀನ್, ಸಿಎ ಗೌತಮ್ ಪೈ ಉಪಸ್ಥಿತರಿದ್ದರು.
ಪಾದಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಚುನಾವಣಾ ಪ್ರಭಾರಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಡಿ ಬಂಗೇರ, ಪುರಂದರ ಜಪ್ಪಿನಮೊಗರು, ಮಂಡಲ ಉಪಾಧ್ಯಕ್ಷರಾದ ರಮೇಶ್ ಕಂಡೆಟ್ಟು, ದೀಪಕ್ ಪೈ, ಅಜಯ್ ಕುಲಶೇಖರ್, ರಮೇಶ್ ಹೆಗ್ಡೆ, ಪಾಲಿಕೆಯ ಸದಸ್ಯರು, ಸಮುದಾಯದ ಪ್ರಮುಖರು, ವಿವಿಧ ಕ್ಷೇತ್ರದ ಗಣ್ಯರು, ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw