ಕೊನೆಗೂ ಸಿಡಿದೆದ್ದ ವಿಪಕ್ಷ ಬಿಜೆಪಿ: ರಾಜ್ಯ ಸರ್ಕಾರದ ಹಗರಣ ಸರಮಾಲೆ ವಿರುದ್ಧ ತೀವ್ರ ಪ್ರತಿಭಟನೆ - Mahanayaka

ಕೊನೆಗೂ ಸಿಡಿದೆದ್ದ ವಿಪಕ್ಷ ಬಿಜೆಪಿ: ರಾಜ್ಯ ಸರ್ಕಾರದ ಹಗರಣ ಸರಮಾಲೆ ವಿರುದ್ಧ ತೀವ್ರ ಪ್ರತಿಭಟನೆ

banglore
18/07/2024


Provided by

ಬೆಂಗಳೂರು: ರಾಜ್ಯದಲ್ಲಿ ಹಗರಣ ಆರೋಪಗಳ ಸರಮಾಲೆಯೇ ಹರಿದು ಬಂದರೂ ಸೈಲೆಂಟ್ ಆಗಿದ್ದ ವಿಪಕ್ಷ ಬಿಜೆಪಿ ಕೊನೆಗೂ ಮೈಕೊಡವಿ ಎದ್ದು ನಿಂತಿದ್ದು, ರಾಜ್ಯ ಸರ್ಕಾರದ ವಿರುದ್ಧ ಅಬ್ಬರದ ಪ್ರತಿಭಟನೆ ನಡೆಸಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರಮುಖ ನಾಯಕರೂ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಶಾಸಕರಾದ ಕೆ.ಗೋಪಾಲಯ್ಯ, ಗೋವಿಂದ ಕಾರಜೋಳ, ಸಿಮೆಂಟ್ ಮಂಜು, ಶ್ರೀವತ್ಸ, ಮಾಜಿ ಸಚಿವ ಕೆ.ಆರ್ ನಾರಾಯಣ ಗೌಡ, ಪರಿಷತ್ ಸದಸ್ಯರು, ಮಾಜಿ ಸಂಸದ ಮುನಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಸೇರಿದಂತೆ ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹಾಗೂ SCSP-TSP ಹಣ ದುರ್ಬಳಕೆ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಎಸ್ಟಿ ಮೋರ್ಚಾ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ಮುಡಾದಲ್ಲಿ ಆಗಿರೋದು ಬ್ರಹ್ಮಾಂಡ ಭ್ರಷ್ಟಾಚಾರ. ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಎಸ್ಸಿ–ಎಸ್ಟಿಗೆ ಮೀಸಲಿಟ್ಟ ಹಣವನ್ನ ದುರ್ಬಳಕೆ ಮಾಡಿದ್ದಾರೆ. ಹತ್ತಾರು ಕೋಟಿ ಬಳ್ಳಾರಿ, ಹೊರ ರಾಜ್ಯಗಳ ಚುನಾವಣೆಗಳಿಗೆ ವರ್ಗಾವಣೆ ಆಗಿದೆ. ಚುನಾವಣೆಯಲ್ಲಿ ಹಣ, ಹೆಂಡಕ್ಕೆ ಇದೇ ಹಣವನ್ನು ಬಳಸಿಕೊಳ್ಳಲಾಗಿದೆ. ಇಷ್ಟಾದರೂ ಕಾಂಗ್ರೆಸ್ ಸರ್ಕಾರ ತಾನು ನಿರಪರಾಧಿ ಅಂತ ಹೇಳಿಕೊಳ್ತಿದೆ. ಈ ಹಗರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಮಾತನಾಡಿ, ಮುಡಾ ಹಾಗೂ ವಾಲ್ಮೀಕಿ ಹಗರಣಗಳ ವಿಚಾರ ರಾಜ್ಯದ ಜನತೆಗೆ ಗೊತ್ತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ತೆಲಂಗಾಣಕ್ಕೆ ವರ್ಗಾವಣೆ ಮಾಡಲಾಗಿದೆ. ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು, ದಲಿತರಿಗೆ ಕಾಂಗ್ರೆಸ್‌ನವರು ಮೋಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಕಾಂಗ್ರೆಸ್ ನವರಿಗೆ ನಾಚಿಕೆ ಆಗೋದಿಲ್ವಾ? ಹಿಂದಿನಿಂದಲೂ ದಲಿತರ ಹೆಸರಿನಲ್ಲಿ ನಾಟಕ ಆಡ್ತಿದ್ದಾರೆ. ರಾಜೀನಾಮೆ ಕೊಡುವವರೆಗೂ ಎಲ್ಲಾ ಜಿಲ್ಲೆಗಳಲ್ಲಿ ನಿರಂತರ ಹೋರಾಟ ಮಾಡ್ತೇವೆ. ಇವರ ಮೋಸದಾಟವನ್ನು ಬಯಲಿಗೆ ಎಳೆಯಬೇಕು ಎಂದು ಕಿಡಿಕಾರಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆಹಾಕಲು ತೆರಳುತ್ತಿದ್ದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ದೊಡ್ಡ ಪ್ರಮಾಣದಲ್ಲೇ ಆಯಿತು. ಕಾರ್ಯಕರ್ತರು ಬ್ಯಾರಿಕೇಡ್ ಕಿತ್ತೆಸೆದು ಆಕ್ರೋಶ ಹೊರಹಾಕಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ