ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಲು ತಡವಾಗಿ ಅಮೆರಿಕಕ್ಕೆ ತೆರಳಿದ ವಿರಾಟ್ ಕೊಹ್ಲಿ!

ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಪಂದ್ಯಾವಳಿಯಲ್ಲಿ ಭಾಗಿಯಾಗಲು ಭಾರತೀಯ ಕ್ರಿಕೆಟ್ ತಂಡದ ಮೊದಲ ಬ್ಯಾಚ್ ಕೆಲವು ದಿನಗಳ ಹಿಂದೆಯೇ ಅಮೆರಿಕಕ್ಕೆ ತೆರಳಿತ್ತು. ಈ ತಂಡದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿರಲಿಲ್ಲ, ಇದೀಗ ತಡವಾಗಿ ಯುನೈಟೆಡ್ ಸ್ಟೇಟ್ಸ್ ವಿರಾಟ್ ಕೊಹ್ಲಿ ತೆರಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿಯೇ ವಿರಾಟ್ ಟೀಮ್ ಇಂಡಿಯಾ ಸೇರಿಕೊಳ್ಳುವ ಸಾಧ್ಯತೆ ಇದೆ. ಅಮೆರಿಕ ತೆರಳುವ ಮೊದಲು ಕೊಹ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್ 2024ರಲ್ಲಿ ಆಡಿದ 15 ಪಂದ್ಯಗಳಲ್ಲಿ ಕೊಹ್ಲಿ 741 ರನ್ ಗಳಿಸಿದ್ದರು. ಆರ್ ಸಿಬಿ ತಂಡವು ಟೂರ್ನಿಯ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಪಂದ್ಯದಲ್ಲಿ ಕೊಹ್ಲಿ 33 ರನ್ ಗಳಿಸಿದ್ದರು. ಇದರೊಂಗೆ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಪಡೆದರು. ಅದಾದ ಬಳಿಕ ಬಿಸಿಸಿಐ ಅನುಮತಿಯೊಂದಿಗೆ ವಿರಾಮ ಪಡೆದು ತಡವಾಗಿ ತಂಡ ಸೇರುವುದಾಗಿ ಹೇಳಿದ್ದರು.
ಟಿ20 ವಿಶ್ವಕಪ್ ಗಾಗಿ ಈಗಾಗಲೇ ಭಾರತ ತಂಡದ ಎಲ್ಲಾ ಆಟಗಾರರು ನ್ಯೂಯಾರ್ಕ್‌ನಲ್ಲಿ ಸೇರಿದ್ದಾರೆ. ಮೊದಲ ಬ್ಯಾಚ್ ನಲ್ಲಿ ಅಮೆರಿಕ ಹೋಗದ ಹಾರ್ದಿಕ್ ಪಾಂಡ್ಯ ಕೂಡಾ, ಗುರುವಾರ ಕ್ಯಾಂಪ್ ಸೇರಿಕೊಂಡಿದ್ದರು. ಇದೀಗ ಭಾರತೀಯ ಶಿಬಿರವನ್ನು ಸೇರಲಿರುವ ಕೊನೆಯ ಆಟಗಾರ ಕೊಹ್ಲಿ.
ಈ ವಾರದ ಆರಂಭದಲ್ಲಿ ತೆರಳಿದ ಮೊದಲ ಬ್ಯಾಚ್‌ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೊಹ್ಲಿ ಕಾಣಿಸಿಕೊಂಡಿರಲಿಲ್ಲ. ಉಳಿದಂತೆ ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಶಿವಂ ದುಬೆ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಭಾನುವಾರ ನ್ಯೂಯಾರ್ಕ್ ತಲುಪಿದ್ದರು.
ನ್ಯೂಯಾರ್ಕ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಬಾಂಗ್ಲಾದೇಶ ವಿರುದ್ಧ ಭಾರತವು ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ತಾತ್ಕಾಲಿಕ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ. ಹೀಗಾಗಿ ಪಂದ್ಯಕ್ಕೂ ಮುನ್ನ ವಿರಾಟ್ ಅಮೆರಿಕ ತಲುಪುವ ನಿರೀಕ್ಷೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97