ಬೃಹತ್ ವಾಕಥಾನ್ ಮೂಲಕ ಮತದಾನ ಜಾಗೃತಿ
ನಮ್ಮ ಹಕ್ಕುಗಳು ಎಷ್ಟು ಪ್ರಾಮುಖ್ಯವೋ ನಮ್ಮ ಕರ್ತವ್ಯಗಳು ಕೂಡಾ ಅಷ್ಟೇ ಪ್ರಾಮುಖ್ಯವಾಗಿದ್ದು, ಎಲ್ಲರೂ ಇರುವಂತಹ ಹಕ್ಕುಗಳ ಬಗ್ಗೆ ನಾಗರಿಕರಿಗೆ ಸರಿಯಾದ ಮಾಹಿತಿಯನ್ನು ನೀಡಿ ಉತ್ತಮ ಅಭ್ಯರ್ಥಿಗೆ ಮತಚಲಾಯಿಸಿ ವಿಧಾನಸಭೆಗೆ ಕಳುಹಿಸಬೇಕೆಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ರವರು ತಿಳಿಸಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮತ್ತು ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾಧಿಕಾರಿಗಳ ಕಛೇರಿ -ಕರ್ನಾಟಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗ ಆಯೋಜಿಸಿದ್ದ “ಬೃಹತ್ ವಾಕಥಾನ್” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವಂತಹ ಪ್ರತಿನಿಧಿಗಳು ವಿಧಾನಸೌಧಕ್ಕೆ ಬಂದು, ವಿಧಾನಸಭಾ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಚರ್ಚಿಸುವಂತಹ ಯೋಜನೆಗಳು, ಪಾಲಿಸಿಗಳು ಕಾರ್ಯರೂಪಕ್ಕೆ ತರುವಂತಹವೆಲ್ಲವೂ ನಮ್ಮೆಲ್ಲರ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ವಿಧಾನ ಸಭೆಗೆ ಆಯ್ಕೆಯಾಗುವ ಪ್ರತಿನಿಧಿಯ ಬಗ್ಗೆ ನಾವೆಲ್ಲರೂ ಮೊದಲು ತಿಳಿದುಕೊಂಡು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕಾರ್ಯನಿರತರಾಗಿರುವ ವಿದ್ಯಾರ್ಥಿಗಳೆಲ್ಲರೂ ನಿಮ್ಮ-ನಿಮ್ಮ ಕ್ಷೇತಗಳಲ್ಲಿ ಎಷ್ಟು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಪಾಲ್ಗೊಂಡಿದ್ದಾರೆ. ಅವರ ಬಗ್ಗೆ ಮತದಾರರಿಗೆ ತಿಳಿದಿದೆಯೇ, ಯಾರು ಉತ್ತಮ ಅಭ್ಯರ್ಥಿ, ಮತಗಟ್ಟೆಗಳು ಎಲ್ಲಿವೆ, ಅಲ್ಲಿಗೆ ಹೇಗೆ ಹೋಗಬೇಕು ಹಾಗೂ ಏನೆಲ್ಲಾ ವ್ಯವಸ್ಥೆಯಿದೆ ಎಂಬುದರ ಬಗ್ಗೆ ನಿಮ್ಮ ಬಡಾವಣೆಯಲ್ಲಿರುವ ಮತದಾರರಿಗೆ ತಿಳಿಸುವಂತಹ ಕೆಲಸ ಮಾಡಬೇಕೆಂದು ಶಾಲಿನಿ ರಜನೀಶ್ ಹೇಳಿದರು.
ನಮ್ಮ ರಾಜ್ಯ ವಿಧಾನಸಭೆಗೆ ಒಳ್ಳೆಯ ಪ್ರತಿನಿಧಿಗಳು ಆಯ್ಕೆಯಾಗಿ ಬರಬೇಕು. ಆ ಪ್ರತಿನಿಧಿ ನಮ್ಮ ದೇಶ ಹಾಗೂ ರಾಜ್ಯವನ್ನು ಪ್ರಗತಿಯ ಪಥದತ್ತ ನಡೆಸುವಂತಾಗಬೇಕು. ಅವರು ಮಾಡುವಂತಹ ಪ್ರಗತಿಗೆ ನಾವೆಲ್ಲರೂ ಸಹಕಾರ ನೀಡಬೇಕು. ಸಂವಿಧಾನದಲ್ಲಿರುವ ಮೂಲಭೂತ ವಿಷಯಗಳನ್ನು ತಿಳಿದು, ಅದರ ಬಗ್ಗೆ ನಾಗರಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
5 ಲಕ್ಷ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ:
ರಾಜ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್)ಯಲ್ಲಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಎಲ್ಲರೂ ಚುನಾವಣಾ ಆಯೋಗದ ಜೊತೆಗೆ ಸೇರಿ ಎಲ್ಲಾ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಭಾಗವಾಗಿ ಮತದಾನದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂದು ಯುವ ಸಮೂಹದೊಡನೆ ವಾಕಥಾನ್ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸಿ ಚುನಾವಣೆ ಯಶಸ್ವಿ ಗೊಳಿಸಬೇಕು ಎಂದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಮಾತನಾಡಿ, ನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಕೈಜೋಡಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಮಹಾಹಬ್ಬದ ದಿನದಂದು ಎಲ್ಲರೂ ಬಂದು ಮತಚಾಯಿಸುವ ಮೂಲಕ ಮತದಾನದ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ವಾಕಥಾನ್ ನಲ್ಲಿ 5000 ವಿದ್ಯಾರ್ಥಿಗಳು ಭಾಗಿ:
ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಮೂಲಕ, ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಹಡ್ಸನ್ ವೃತ್ತದ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣದವರೆಗೆ ನಡೆದ ಬೃಹತ್ ವಾಕಥಾನ್ ನಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ 5,000ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಬಿತ್ತಿ ಪತ್ರಗಳನ್ನು ಹಿಡಿದು ರಸ್ತೆಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಮತದಾರರಲ್ಲಿ ಮತದಾನ ಮಾಡಲು ಪ್ರೇರೇಪಿಸಿದರು.
ಮತದಾನ ಸಂಕಲ್ಪ ನಾಟಕ ಪ್ರದರ್ಶನ:
ಬಿ.ಎಂ.ಟಿ.ಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ನಾಟಕ ತಂಡದಿಂದ ಪ್ರಜಾಪ್ರಭುತ್ವದಲ್ಲಿ ಮತದಾನದ ಪ್ರಾಮುಖ್ಯತೆಯನ್ನು ತಿಳಿಸುವಂತಹ “ಮತದಾನ ಸಂಕಲ್ಪ” ನಾಟಕವನ್ನು ಟಿ.ಎಂ ಬಾಲಕೃಷ್ಣ ರವರು ರಚಿಸಿದ್ದು, ನಾಟಕದ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಈ ವೇಳೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯಾದ ಶ್ರೀ ವಸ್ತ್ರದ್, ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀ ಸಂಗಪ್ಪ, ಬೆಂಗಳೂರು ಐಕಾನ್ ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























