ವೃದ್ಧೆಯ ಕಣ್ಣಿನಿಂದ 9 ಸೆ.ಮೀ. ಹುಳುವನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು! - Mahanayaka

ವೃದ್ಧೆಯ ಕಣ್ಣಿನಿಂದ 9 ಸೆ.ಮೀ. ಹುಳುವನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು!

eye operation
07/06/2021


Provided by

ಉಡುಪಿ: ಕಣ್ಣು ನೋವು ಎಂದು ನೇತ್ರಾಲಯಕ್ಕೆ ಬಂದಿದ್ದ 70 ವರ್ಷ ವಯಸ್ಸಿನ ವೃದ್ಧೆಯ ಕಣ್ಣಿನಲ್ಲಿ  9 ಸೆ.ಮೀ.  ಉದ್ದದ ಜೀವಂತ ಹುಳವನ್ನು  ವೈದ್ಯರು ಹೊರ ತೆಗೆದಿದ್ದು, ವೈದ್ಯರ ಸಮಯ ಪ್ರಜ್ಞೆಯಿಂದ ವೃದ್ಧೆಯ ಪ್ರಾಣ ಉಳಿದಿದೆ.

ಜೂನ್ 1ರಂದು ಪ್ರಸಾದ್ ನೇತ್ರಾಲಯಕ್ಕೆ ವೃದ್ಧೆಯೊಬ್ಬರು ಕಣ್ಣು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆಗಮಿಸಿದ್ದರು. ವೃದ್ಧೆಯ ಕಣ್ಣನ್ನು  ಪರಿಶೀಲಿಸಿದ ವೇಳೆ  ಎಡ ಕಣ್ಣಿನಲ್ಲಿ ಹುಳವೊಂದು ಅಕ್ಷಿಪಟಲದ ಸುತ್ತ ಸುತ್ತಿರುವುದು ಕಂಡು ಬಂದಿದೆ.

ಇನ್ನಷ್ಟು ತಡವಾದರೆ, ಹುಳು ಕಣ್ಣಿನಿಂದ ಮೆದುಳು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅರಿತ ವೈದ್ಯರು  ಹುಳುವನ್ನು ನಿಷ್ಕ್ರೀಯಗೊಳಿಸಲು  ಔಷಧಿ ನೀಡಿದ್ದಾರೆ. ಇದಾದ ಬಳಿಕ ವೃದ್ಧೆಯ ಕಣ್ಣು ನೋವು ವಾಸಿಯಾಗಿತ್ತು.

ಇದಾಗಿ 3 ದಿನಗಳ ಬಳಿಕ ಕಣ್ಣಿನಲ್ಲಿ ಯಾವುದೇ ತೊಂದರೆಗಳಿರಲಿಲ್ಲ. ಆದರೆ ಭಾನುವಾರ ಸಂಜೆ ಬಲಗಣ್ಣಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ.  ಮನೆಯವರು ವೃದ್ಧೆಯ ಕಣ್ಣನ್ನು ನೋಡಿದಾಗ ಹುಳುವೊಂದು ಕಣ್ಣಿನಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ. ಅವರು ಗಾಬರಿಯಿಂದ ಮತ್ತೆ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಆಸ್ಪತ್ರೆಯ ವೈದ್ಯರಾದ ಡಾ.ಕೃಷ್ಣಪ್ರಸಾದ್ ಅವರ ನೇತೃತ್ವದ ವೈದ್ಯರ ತಂಡ, ತಡಮಾಡದೇ ಹೊರರೋಗಿಗಳ ವಿಭಾಗದಲ್ಲಿಯೇ ತುರ್ತು ಚಿಕಿತ್ಸೆ ಮಾಡಿದ್ದು, ಈ ವೇಳೆ 9 ಸೆ.ಮೀ. ಉದ್ದದ ಜೀವಂತ ಹುಳು ಕಣ್ಣಿನಿಂದ ಹೊರ ಬಂದಿದೆ.

ಪ್ರಸಾದ್ ನೇತ್ರಾಲಯದ ವೈದ್ಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ, ಕೃಷ್ಣ ಪ್ರಸಾದ್, ತಜ್ಞ ವೈದ್ಯೆ ಡಾ. ಅಪರ್ಣಾ ನಾಯಕ್ ಮತ್ತು ಅವರ ತಂಡದ ಪರಿಶ್ರಮದಿಂದ ವೃದ್ಧೆ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ವೃದ್ಧೆಯ ಕಣ್ಣಿನಿಂದ ತೆಗೆಯಲಾಗಿರುವ ಹುಳುವನ್ನು ಅಧ್ಯಯನಕ್ಕಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ