ನಿಮ್ಮಿಂದ ನಾವು ಇಂಥದೊಂದು ನಡೆಯನ್ನು ನಿರೀಕ್ಷಿಸಿರಲಿಲ್ಲ, ನಂಬಿಕೆ ಹುಸಿಗೊಳಿಸಿದಿರಿ: ಸ್ಪೀಕರ್ ಖಾದರ್ ಗೆ ಸುನೀಲ್ ಕುಮಾರ್ ಪತ್ರ

ಬೆಂಗಳೂರು: ಬಿಜೆಪಿಯ 10 ಸದಸ್ಯರನ್ನು ಸ್ಪೀಕರ್ ಯುಟಿ ಖಾದರ್ ಅಮಾನತು ಮಾಡಿದ್ದ ಸ್ಪೀಕರ್ ನಿರ್ಧಾರಕ್ಕೆ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಏಕಪಕ್ಷೀಯವಾಗಿ ಅಮಾನತು ಶಿಕ್ಷೆ ಕೊಟ್ಟಿದ್ದಕ್ಕಾಗಿ ಧನ್ಯವಾದ ಸಮರ್ಪಣೆ ಮಾಡಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ನಿಮ್ಮಿಂದ ನಾವು ಇಂಥದೊಂದು ನಡೆಯನ್ನು ನಿರೀಕ್ಷಿಸಿರಲಿಲ್ಲ. ಸಭಾಧ್ಯಕ್ಷ ಪೀಠದ ಮೇಲೆ ಕುಳಿತು ಎಲ್ಲರನ್ನೂ ಸಮಾನರೆಂದು ಪರಿಗಣಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಖಾದರ್ ಸಮರ್ಥವಾಗಿ ಎತ್ತಿ ಹಿಡಿಯಬಹುದೆಂಬ ನಮ್ಮ ನಿರೀಕ್ಷೆ ಇಂದು ಉಸುಕಿನ ಸೌಧದಂತೆ ಕುಸಿದು ಹೋಗಿದೆ .ರಾಜ್ಯದ ಶ್ರೇಷ್ಠ ಸ್ಪೀಕರ್ ಎಂದು ಮಾದರಿ ಹೆಜ್ಜೆ ಬಿಟ್ಟು ಹೋದ ದಿವಂಗತ ವೈಕುಂಠ ಬಾಳಿಗರ ಜಿಲ್ಲೆಯಿಂದ ಬಂದ ನೀವು ಅವರದೇ ಮಾರ್ಗದಲ್ಲಿ ನಡೆಯಬಹುದೆಂದು ವೈಯಕ್ತಿಕವಾಗಿ ನಾನು ಭಾವಿಸಿದ್ದೆ. ಆದರೆ, ನೀವು ನಮ್ಮೆಲ್ಲರ ನಂಬಿಕೆಯನ್ನು ಹುಸಿಗೊಳಿಸಿ ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದಿರಿ. ನನ್ನನ್ನು ಸೇರಿ ಹತ್ತು ಜನರನ್ನು ಅಮಾನತುಗೊಳಿಸುವ ಮೂಲಕ ಕಾಂಗ್ರೆಸ್ ನಾಯಕರ ಎದೆಯಲ್ಲಿ ಅಂತಸ್ಥವಾದ ಹಿಟ್ಲರ್ ನನ್ನು ವಿಧಾನಸಭೆಯ ಮೂಲಕ ಪ್ರದರ್ಶನಕ್ಕೆ ಇಟ್ಟಿದ್ದೀರಿ.
2004ರಿಂದ ಇಲ್ಲಿಯವರೆಗೆ ನಾನು ಸದನದಲ್ಲಿ ಹೇಗೆ ನಡೆದುಕೊಂಡಿದ್ದೇನೆ ಎಂಬುದಕ್ಕೆ ನೀವು ಕೂಡಾ ಸಾಕ್ಷಿಯಾಗಿದ್ದೀರಿ. ಅನಾರೋಗ್ಯ ಹಾಗೂ ಅತಿ ತುರ್ತು ಸಂದರ್ಭವನ್ನು ಹೊರತುಪಡಿಸಿದರೆ ನಾನು ಸದನಕ್ಕೆ ಗೈರಾದ ದಿನಗಳೇ ಇಲ್ಲ. ವಿಧಾನಸಭೆಯ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಶಾಸಕನ ಕರ್ತವ್ಯ ಎಂದು ಭಾವಿಸಿ ಅದರಂತೆ ನಡೆದುಕೊಂಡವರು ನಾವು. ಆದರೆ, ನಿಮ್ಮ ಪಕ್ಷದ ಅಜೆಂಡಾವನ್ನು ಪೋಷಿಸುವುದಕ್ಕಾಗಿ ನಾವು ನಮ್ಮ ಶ್ರದ್ಧಾ ಕೇಂದ್ರ ಪ್ರವೇಶಿಸುವುದಕ್ಕೆ ನಿರ್ಬಂಧ ಹಾಕಿಬಿಟ್ಟಿರಲ್ಲ, ಇದಕ್ಕಾಗಿ ನಿಮಗೊಂದು ದೀರ್ಘದಂಡ ಪ್ರಣಾಮ, ಅನಂತಾನಂಥ ಧನ್ಯವಾದ ಎಂದು ಪತ್ರದಲ್ಲಿ ಸುನೀಲ್ ಕುಮಾರ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw