ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ನವಜಾತ ಶಿಶುವಿಗೆ ಕಾವಲು ನಿಂತ ಬೀದಿನಾಯಿಗಳು: ಅಚ್ಚರಿಯ ಘಟನೆ
ಕೋಲ್ಕತ್ತ: ಬೀದಿನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿರುವ ಹಲವು ಸುದ್ದಿಗಳನ್ನು ನೀವು ನೋಡಿರಬಹುದು, ಇತ್ತೀಚೆಗಂತೂ ವೃದ್ಧರ ಮೇಲೆ ಮಹಿಳೆಯರ ಮೇಲೆ ಮಾತ್ರವಲ್ಲದೇ ಎಲ್ಲರ ಮೇಲೆ ಬೀದಿನಾಯಿಗಳು ನಡೆಸುತ್ತಿರುವ ದಾಳಿಗಳ ಸುದ್ದಿ ಕಂಡು ಜನರು ಬೆಚ್ಚಿಬೀಳುವುದುಂಟು. ಆದ್ರೆ, ಪಶ್ಚಿಮ ಬಂಗಾಳದಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಬೀದಿಯಲ್ಲಿ ಬಿಟ್ಟು ಹೋಗಿದ್ದ ನವಜಾತಶಿಶುವೊಂದನ್ನು ಬೀದಿನಾಯಿಗಳು ರಾತ್ರಿಯಿಡೀ ಕಾವಲು ಕಾದು ರಕ್ಷಿಸಿರುವ ಅಪರೂಪದ ಘಟನೆ ನಡೆದಿದೆ.
ನಾದಿಯಾ ಜಿಲ್ಲೆಯ ರೈಲ್ವೆ ಕಾರ್ಮಿಕರ ಕಾಲೋನಿಯಲ್ಲಿ ಯಾರೋ ನವಜಾತಶಿಶುವನ್ನು ಶೌಚಾಲಯದ ಹೊರಗೆ ಇಟ್ಟು ಸ್ಥಳದಿಂದ ಪರಾರಿಯಾಗಿದ್ದರು. ಮಗುವಿನ ಮೈಮೇಲೆ ಬಟ್ಟೆ ಕೂಡ ಇರಲಿಲ್ಲ, ಆದರೆ ನವಜಾತ ಶಿಶುವಿನ ಮೇಲೆ ಬೀದಿನಾಯಿಗಳು ದಾಳಿ ಮಾಡದೇ, ಮಗುವಿಗೆ ವೃತ್ತಾಕಾರ ಹಾಕಿ ನಾಯಿಗಳು ಮಲಗಿ ಕಾವಲು ಕಾದಿವೆ.
ಸ್ಥಳೀಯರು ಹೇಳುವಂತೆ, ಮುಂಜಾನೆ ಮಗು ಅಳುವ ಸದ್ದು ಕೇಳಿತ್ತು. ಯಾರದ್ದೋ ಮಗು ಅನಾರೋಗ್ಯದಿಂದ ಕೂಗುತ್ತಿದೆ ಎಂದು ನಾವು ಭಾವಿಸಿದ್ದೆವು. ಆದ್ರೆ ಹೊರಗೆ ಬಂದು ನೋಡಿದ ವೇಳೆ ನಮಗೆ ಶಾಕ್ ಆಯಿತು. ನವಜಾತ ಶಿಶುವಿನ ಸುತ್ತ ನಾಯಿಗಳು ಮಲಗಿದ್ದವು. ನಾಯಿಗಳು ಮಗುವಿಗೆ ಕಾವಲು ಕಾಯುತ್ತಿದ್ದಂತೆ ಕಾಣುತ್ತಿತ್ತು ಅದನ್ನು ನಂಬಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ನಂತರ ಸ್ಥಳೀಯ ವ್ಯಕ್ತಿಯೊಬ್ಬರು ಮಗುವನ್ನು ದುಪ್ಪಟ್ಟಾದಲ್ಲಿ ಸುತ್ತಿಕೊಂಡು ಸಮೀಪದ ಮಹೇಶ್ ಗಂಜ್ ಆಸ್ಪತ್ರೆಗೆ ಕರೆದೊಯ್ದರು, ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಗುವಿನ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಮಗುವನ್ನು ಬಿಟ್ಟು ಹೋದವರು ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























