ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಅಪರಾಧ ಕಾನೂನುಗಳ ಬಗ್ಗೆ ಡಾ.ಜಿ.ಪರಮೇಶ್ವರ್ ಹೇಳಿದ್ದೇನು? - Mahanayaka
10:05 AM Thursday 21 - August 2025

ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಅಪರಾಧ ಕಾನೂನುಗಳ ಬಗ್ಗೆ ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

dr g paramewsher
01/07/2024


Provided by

ಬೆಂಗಳೂರು: ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಅಪರಾಧ ಕಾನೂನುಗಳ ಪರಿಣಾಮದ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಕಾನೂನುಗಳು ಅನ್ವಯವಾಗಲಿವೆ. ಹೊಸ ಕಾಯ್ದೆಗಳ ಸಕ್ಸಸ್ ಅಥವಾ ಫೇಲ್ಯೂರ್ ಈಗಲೇ ಗೊತ್ತಾಗುವುದಿಲ್ಲ. ಪ್ರಕರಣಗಳು ದಾಖಲಾದ ಬಳಿಕ ಕೋರ್ಟ್‌ನಲ್ಲಿ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ಇಡೀ ದೇಶದಲ್ಲಿ ಜಾರಿ ಮಾಡಿರುವುದರಿಂದ ಎಲ್ಲ ಕಡೆ ಈ ಬಗ್ಗೆ ಪ್ರತಿಕ್ರಿಯೆ ಬರಬೇಕು. ಸರ್ಕಾರ ಕೆಲ ಪರಿಷ್ಕರಣೆ ಮಾಡಬಹುದು ಎಂದು ಹೇಳಿದರು.

ಹೊಸ ಕಾನೂನುಗಳ ಬಗ್ಗೆ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಪೊಲೀಸರಿಗಾಗಿ ಹೊಸದಾಗಿ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಪೊಲೀಸರಿಗೆ ಹೊಂದಿಕೆ ಆಗೋವರೆಗೂ ಈ ಆ್ಯಪ್ ನೋಡಿಕೊಂಡು ಕೆಲಸ ಮಾಡಲು ಸಹಾಯವಾಗಲಿದೆ ಎಂದರು.

ಕಾನ್ ಸ್ಟೇಬಲ್ಗಳ ಅಂತರ ಜಿಲ್ಲಾ ವರ್ಗಾವಣೆಗೆ ನಿಯಮಗಳನ್ನು ರೂಪಿಸಲಾಗುತ್ತಿದೆ. ಈವರೆಗೆ ನಿಯಮಗಳಿರಲಿಲ್ಲ. ಪತಿ-ಪತ್ನಿ ವರ್ಗಾವಣೆಯನ್ನು ಮಾಡಲಾಗುವುದು. ಈ ಕುರಿತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚಿಸಿದ್ದೇನೆ. ಅಂತರ ಜಿಲ್ಲಾ ವರ್ಗಾವಣೆ ಸಮಸ್ಯೆಯನ್ನು ಶೀಘ್ರವಾಗಿ ಬಗೆ ಹರಿಸಲಾಗುವುದು ಎಂದು ತಿಳಿಸಿದರು.

ದರ್ಶನ್ ಪ್ರಕರಕ್ಕೆ ತೋರಿಸಿರುವ ಆಸಕ್ತಿ ವಾಲ್ಮಿಕಿ ನಿಗಮದ ಅಕ್ರಮದ ಪ್ರಕರಣಕ್ಕೆ ನೀಡುತ್ತಿಲ್ಲ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, ತಪ್ಪು ಮಾಡಿದವರ ರಕ್ಷಣೆಗೆ ಸರ್ಕಾರ ನಿಂತಿಲ್ಲ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಜರುಗಲಿದೆ. ಅಧಿಕಾರಿಗಳು ಆಗಿರಬಹುದು ಅಥವಾ ರಾಜಕೀಯ ವ್ಯಕ್ತಿಗಳು ಇರಬಹುದು, ಯಾರೇ ಇದ್ದರೂ ಕ್ರಮ ಜರುಗಿಸುವುದು ಖಚಿತ ಎಂದರು.

ಈ ಪ್ರಕರಣದಲ್ಲಿ ಸಿಬಿಐನವರು ಬ್ಯಾಂಕ್ ಅಧಿಕಾರಿಗಳ ವಂಚನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಇಲಾಖೆಯಲ್ಲಿನ ವಂಚನೆಯ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ಬಿಜೆಪಿಯವರು ಪ್ರತಿಭಟನೆ ಮಾಡಲಿ. ಸಿಎಂ ಮನೆಗರ ಮುತ್ತಿಗೆ ಹಾಕಲಿ ಯಾರು ಬೇಡ ಅನ್ನುತ್ತಾರೆ. ತನಿಖೆ ವೇಳೆ ಸಚಿವರು, ಶಾಸಕರ ಮೇಲೆ ಆರೋಪಗಳನ್ನು ಮಾಡುವುದು ಸಹಜ. ತನಿಖೆಯ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಭವಿಷ್ಯದ ಕುರಿತು ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಅವರವರ ವ್ಯಾಖ್ಯಾನಗಳು ಅವು. ಅವರಲ್ಲೇ ಅವರ ಹೇಳಿಕೆಗಳು ವಿಭಿನ್ನವಾಗಿವೆ. ಬೊಮ್ಮಾಯಿ ಒಂದು ಹೇಳಿಕೆ ಕೊಟ್ಟರೆ, ಸಿ.ಟಿ.ರವಿ ಇನ್ನೊಂದು ಹೇಳಿಕೆ ಕೊಡುತ್ತಾರೆ. ಅವರಲ್ಲಿ ಹೊಂದಾಣಿಕೆ ಇಲ್ಲ. ಸರ್ಕಾರ ಅಭಿವೃದ್ಧಿಯನ್ನು ಮರೆತಿಲ್ಲ. ಜನರಿಗೆ ಕೊಟ್ಟ ಮಾತನ್ನು ಮರೆತಿಲ್ಲ. ಗ್ಯಾರಂಟಿ ಯೋಜನೆಗಳ ಜೊತೆ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇವೆ. ಯಾವ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ ಎಂದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿ, ಹೋರಾಟದ ಉದ್ದೇಶಗಳು ಸರಿಯಿದ್ದರೆ ಸರ್ಕಾರ ಗಮನಿಸುತ್ತದೆ. ಕಾನೂನು ಸುವ್ಯವಸ್ಥೆ ಯಾರು ಸಹ ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ