ಹೆಣ್ಣು ಮಕ್ಕಳಿಗೆ ಗಡ್ಡ—ಮೀಸೆ ಬೆಳೆಯಲು ಕಾರಣವೇನು? - Mahanayaka

ಹೆಣ್ಣು ಮಕ್ಕಳಿಗೆ ಗಡ್ಡ—ಮೀಸೆ ಬೆಳೆಯಲು ಕಾರಣವೇನು?

women hair In face
23/04/2024


Provided by

ಉತ್ತರಪ್ರದೇಶದ ಪ್ರಾಚಿ ನಿಗಮ್‌. ಪ್ರಾಚಿ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಪ್ರತಿಭಾವಂತ ಹುಡುಗಿಯಾಗಿದ್ದಾಳೆ. ಈಕೆ  ಶೇ 98.5 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೂ ಕೂಡ ಆಕೆಯ ಸಾಧನೆಗೆ ಅಭಿನಂದಿಸದೇ, ಆಕೆಯ ಮುಖದ ಮೇಲೆ ಬೆಳೆದ ಗಡ್ಡ—ಮೀಸೆಗಳ ಕಾರಣಕ್ಕೆ ಟ್ರೋಲ್ ಮಾಡಿರುವ ಘಟನೆ ಅಮಾನವೀಯ.

ಪ್ರಾಚಿ ನಿಗಮ್‌ ನ ಮುಖದ ಮೇಲೆ ಗಡ್ಡ ಮೀಸೆ ಬೆಳೆದಿರುವುದು ಆಕೆಯ ತಪ್ಪಲ್ಲ.  ಹೆಣ್ಣು ಮಕ್ಕಳಿಗೆ ಗಡ್ಡ ಮೀಸೆ  ಬೆಳವಣಿಗೆಯಾಗಲು ಕಾರಣ ಏನು ಎನ್ನುವುದು ತಿಳಿಯದ ಅಜ್ಞಾನಿಗಳು ಪ್ರಾಚಿಯನ್ನು ಟ್ರೋಲ್ ಮಾಡಿ ವಿಕೃತ ಆನಂದ ಪಡೆದುಕೊಂಡರು.  ಹೀಗಾಗಿ ಹೆಣ್ಣು ಮಕ್ಕಳಲ್ಲಿ ಗಡ್ಡ ಮೀಸೆ ಯಾಕೆ ಬೆಳವಣಿಗೆ ಆಗುತ್ತದೆ, ಅದಕ್ಕೆ ಕಾರಣ ಏನು ಎನ್ನುವುದನ್ನು ನಾವು ವಿವರವಾಗಿ ತಿಳಿದುಕೊಳ್ಳೋಣ…

ಹೆಣ್ಣುಮಕ್ಕಳಿಗೆ ಮುಖದ ಮೇಲೆ ಗಡ್ಡ ಮೀಸೆಯಂತೆ ಕೂದಲು ಹುಟ್ಟಲು ಪ್ರಮುಖ ಕಾರಣ ಹಾರ್ಮೋನ್‌ ವ್ಯತ್ಯಯ. ಹಾರ್ಮೋನ್‌ ವ್ಯತ್ಯಯ ಉಂಟಾಗಲು ಕಾರಣಗಳು ಹಲವು. ನಮ್ಮ ಜೀವನಕ್ರಮ, ಆಹಾರ ಪದ್ಧತಿ, ಆನುವಂಶಿಕ ಕಾರಣಗಳು ಸೇರಿದಂತೆ ಹಲವು ಅಂಶಗಳು ಹೆಣ್ಣುಮಕ್ಕಳಿಗೆ ಹಾರ್ಮೋನ್‌ ವ್ಯತ್ಯಯಕ್ಕೆ ಕಾರಣವಾಗುತ್ತದೆ.

ಹೆಣ್ಣುಮಕ್ಕಳಲ್ಲಿ ಪ್ರಮುಖವಾಗಿ ಪ್ರೊಜೆಸ್ಟೆರಾನ್‌, ಈಸ್ಟ್ರೋಜೆನ್‌, ಕಾರ್ಟಿಸೋಲ್‌, ಥೈರಾಯಿಡ್‌, ಟೆಸ್ಟೊಸ್ಟೆರಾನ್‌ ಹಾರ್ಮೋನ್‌ ಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಅಂಡಾಶಯದಲ್ಲಿ ಪುರುಷ ಹಾರ್ಮೋನ್‌ ಎಂದೇ ಕರೆಸಿಕೊಳ್ಳುವ ಆಂಡ್ರೋಜನ್‌ ಹಾರ್ಮೋನ್‌ ಉತ್ಪತ್ತಿಯ ಪ್ರಮಾಣ ಏರಿಕೆಯಾದರೆ ಮುಖದ ಮೇಲೆ ಕೂದಲುಗಳು ಬೆಳೆಯಲು ಆರಂಭವಾಗುತ್ತದೆ. ಹಾರ್ಮೋನ್‌ ವ್ಯತ್ಯಯದಿಂದ ಹೆಣ್ಣುಮಕ್ಕಳಿಗೆ ಪಿಸಿಓಡಿ, ಥೈರಾಯಿಡ್‌, ಪಿಸಿಓಎಸ್‌ ನಂತಹ ಸಮಸ್ಯೆಗಳೂ ಎದುರಾಗಬಹುದು.

ಸಾಮಾಜಿಕ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ:

ಹಾರ್ಮೋನ್‌ ವ್ಯತ್ಯಯದಿಂದ ಹೆಣ್ಣುಮಕ್ಕಳು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಪಿಸಿಓಡಿ, ಥೈರಾಯಿಡ್‌ ನಂತಹ ಸಮಸ್ಯೆಗಳು ಎದುರಾದಾಗ ಮುಟ್ಟಿನ ತೊಂದರೆ, ದೇಹ ತೂಕ ಹೆಚ್ಚಳವಾಗುವುದು, ಮಾನಸಿಕ ಕಿರಿಕಿರಿ, ಮುಖ ಸೇರಿದಂತೆ ದೇಹದ ಭಾಗಗಳಲ್ಲಿ ಕೂದಲು ಬೆಳೆಯುವುದು, ಒತ್ತಡ ಹೆಚ್ಚುವುದು, ಕಿರಿಕಿರಿ ಇಂತಹ ಸಮಸ್ಯೆಗಳು ಎದುರಾಗುತ್ತವೆ.  ಜೊತೆಗೆ ಸಾಮಾಜಿಕವಾಗಿ ಅವರು ಟೀಕೆ, ಟ್ರೋಲ್‌ ಗಳನ್ನು ಕೂಡ ಎದುರಿಸಬೇಕಾಗಬಹುದು.

ಮುಖದ ಮೇಲಿನ ಬೇಡದ ಕೂದಲು ಹಾಗೂ ತೂಕ ಹೆಚ್ಚಳದ ಕಾರಣದಿಂದ ಎಲ್ಲಿಗೂ ಹೋಗದೇ ನಾಲ್ಕು ಗೋಡೆಗಳ ಮಧ್ಯೆ ಸಮಯ ಕಳೆಯುವವರೂ ಇದ್ದಾರೆ. ಹಲವರಿಗೆ ಈ ದೈಹಿಕ ಸಮಸ್ಯೆ ಮಾನಸಿಕ ಸಮಸ್ಯೆಯಾಗುವ ಸಂಭವವೂ ಹೆಚ್ಚು. ಇಂತಹ ಸಂದರ್ಭದಲ್ಲಿ ಪೋಷಕರು ಹಾಗೂ ಆತ್ಮೀಯರು ಹೆಣ್ಣುಮಕ್ಕಳಿಗೆ ಬೆಂಬಲ ಸೂಚಿಸಬೇಕು.

ಹಾರ್ಮೋನ್‌ ವ್ಯತ್ಯಯಕ್ಕೆ  ಚಿಕಿತ್ಸೆ ಇದೆಯಾ?:

ಹೆಣ್ಣುಮಕ್ಕಳಲ್ಲಿ ಉಂಟಾಗುವ ಹಾರ್ಮೋನ್‌ ವ್ಯತ್ಯಯಕ್ಕೆ ಆಹಾರಕ್ರಮ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು, ವ್ಯಾಯಾಮ ಮಾಡುವುದು, ಪ್ರತಿದಿನ ವಾಕಿಂಗ್‌ ಮಾಡುವುದು ಇಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಸಮಸ್ಯೆ ತೀವ್ರವಾದರೆ ತಜ್ಞ ವೈದ್ಯರನ್ನು ಸಂಪರ್ಕಿಸಬಹುದು. ಈ ಸಮಸ್ಯೆಗಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ, ಬೇಗನೆ ಪರಿಹಾರ ಕಂಡುಕೊಳ್ಳಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ