ಏಕಾಏಕಿ ನುಗ್ಗಿ ಬಂದು ದಾಳಿ ನಡೆಸಿದ ಕಾಡುಹಂದಿ: ರೈತ ಸಾವು, ಇಬ್ಬರಿಗೆ ಗಾಯ

ಹಾಸನ: ಕಾಡು ಹಂದಿಯ ದಾಳಿಗೆ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಜೇಂದ್ರ ಗೌಡ(63) ಕಾಡು ಹಂದಿಯ ದಾಳಿಗೆ ಸಾವನ್ನಪ್ಪಿದ ರೈತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕಾಡುಹಂದಿಯ ದಾಳಿಗೆ ಇಬ್ಬರು ಮಹಿಳೆಯರಿಗೂ ಗಾಯಗಳಾಗಿವೆ.
ಜಮೀನಿಗೆ ನೀರು ಹಾಯುತ್ತಿದ್ದ ವೇಳೆ ಏಕಾಏಕಿ ಕಾಡುಹಂದಿ ನುಗ್ಗಿ ಬಂದು ದಾಳಿ ನಡೆಸಿದೆ. ಕಾಡು ಹಂದಿಯ ದಾಳಿಗೆ ರಾಜೇಗೌಡ ಅವರು ಸಾವನ್ನಪ್ಪಿದರೆ, ಕಾಂತಮ್ಮ ಹಾಗು ನಂಜಮ್ಮ ಅವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಹಾಸನದ ಹೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಜಿಲ್ಲೆಯ ಜನತೆ ಆನೆ, ಚಿರತೆ, ಹುಲಿಗಳ ದಾಳಿಯಿಂದಾಗಿ ರೋಸಿ ಹೋಗಿದ್ದಾರೆ. ಈ ನಡುವೆ ಕಾಡುಹಂದಿಗಳ ಕಾಟವೂ ಆರಂಭವಾಗಿದ್ದು, ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ. ಬೇಲೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲೂ ಮಹಿಳೆಯೊಬ್ಬರ ಮೇಲೆ ಕಾಡು ಹಂದಿ ದಾಳಿ ನಡೆಸಿರುವ ಪ್ರಕರಣ ನಡೆದಿದೆ. ತಕ್ಷಣವೇ ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.