ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ಸರ್ಕಾರ

ಬೆಳಗಾವಿ: ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.
ಪ್ರೇಮಿಗಳು ಮನೆಬಿಟ್ಟು ಓಡಿಹೋಗಿದ್ದ ಹಿನ್ನೆಲೆಯಲ್ಲಿ ಯುವಕನ ಮನೆಗೆ ದಾಳಿ ನಡೆಸಿದ್ದ ಯುವತಿಯ ಕಡೆಯವರು, ಆತನ ತಾಯಿಯನ್ನು ವಿವಸ್ತ್ರಗೊಳಿಸಿ ಗಹಲ್ಲೆ ನಡೆಸಿದ್ದರು. ಡಿ.10ರ ಮಧ್ಯರಾತ್ರಿ ನಡೆದಿದ್ದ ಈ ಅಮಾನವೀಯ ಘಟನೆಗೆ ರಾಜ್ಯ ಸರ್ಕಾರ ಮಾತ್ರವಲ್ಲದೆ ಇಡೀ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಘಟನೆ ಸಂಬಂಧ ಪೊಲೀಸರು 11 ಮಂದಿಯನ್ನು ಬಂಧನಕ್ಕೊಳಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಪ್ರತಿಪಕ್ಷ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಕಿಡಿಕಾರಿದೆ. ಕೇಂದ್ರ ಮಹಿಳಾ ಆಯೋಗ, ಎಸ್ಟಿ ರಾಷ್ಟ್ರೀಯ ನಿಯೋಗ ಹಾಗೂ ಬಿಜೆಪಿ ಸತ್ಯಶೋಧನಾ ಸಮಿತಿ ಕೂಡ ಭಾನುವಾರ ಬೆಳಗಾವಿಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದೆ. ಈ ಮಧ್ಯೆ ಹೈಕೋರ್ಟ್ ಕೂಡ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಈ ಎಲ್ಲಾ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.