ಇನ್ಮುಂದೆ ಮುಸ್ಲಿಮರು ಯಾವುದೇ ಮಸೀದಿಯನ್ನು ಬಿಟ್ಟುಕೊಡಲ್ಲ: ಅಸಾದುದ್ದೀನ್ ಓವೈಸಿ ಹೇಳಿಕೆ

ಇನ್ಮುಂದೆ ಮುಸ್ಲಿಂ ಸಮುದಾಯದವರು ಯಾವುದೇ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಓವೈಸಿ ವಿವಾದಿತ ಜ್ಞಾನವಾಪಿ ಸಂಕೀರ್ಣದ ಕುರಿತು ನಡೆಯುತ್ತಿರುವ ನ್ಯಾಯಾಲಯದ ಪ್ರಕರಣ ಮತ್ತು ಮಸೀದಿಯ ಕೆಳಗೆ ದೇವಾಲಯದ ಅಸ್ತಿತ್ವದ ಬಗ್ಗೆ ಹಿಂದೂಗಳ ಪರವಾದ ಹಕ್ಕುಗಳ ಕುರಿತು ಮಾತನಾಡಿದರು. ಇನ್ನು ನಾವು ಯಾವುದೇ ಮಸೀದಿಯನ್ನು ಕೊಡಲು ಸಾಧ್ಯವಿಲ್ಲ. ನಾವು ನ್ಯಾಯಾಲಯದಲ್ಲಿ ಹೋರಾಡುತ್ತೇವೆ. ನಾವು ಒಮ್ಮೆ ಮೋಸ ಹೋಗಿದ್ದೇವೆ. ಮತ್ತೊಮ್ಮೆ ಮೋಸ ಹೋಗುವುದಿಲ್ಲ ಎಂದರು.
ಜ್ಞಾನವಾಪಿ ಪ್ರಕರಣ ಕೊನೆಗೊಳ್ಳುವುದಿಲ್ಲ ಎಂದು ನಾನು ಖಡಾಖಂಡಿತವಾಗಿ ಹೇಳುತ್ತಿದ್ದೇನೆ. ನಾವು ಅದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಮತ್ತು ನಮ್ಮ ಬಳಿ ಇರುವ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ತೋರಿಸುತ್ತೇವೆ. ಜ್ಞಾನವಾಪಿಯಲ್ಲಿ ನಿರಂತರವಾಗಿ ನಮಾಜ್ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಜ್ಞಾನವಾಪಿಯಲ್ಲಿ ನಾವು ನಮಾಜ್ ಮಾಡುತ್ತಿದ್ದೇವೆ.
ಬಾಬರಿ ಮಸೀದಿ ಪ್ರಕರಣ ನೋಡಿದರೆ ಅಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಿರಲಿಲ್ಲ. ಇಲ್ಲಿ ನಾವು ನಿರಂತರವಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ವಾಸ್ತವವಾಗಿ 1993 ರಿಂದ ಇಲ್ಲಿ ಯಾವುದೇ ಪೂಜೆ ಮಾಡಿಲ್ಲ. ನಾಳೆ ರಾಷ್ಟ್ರಪತಿ ಭವನವನ್ನು ಅಗೆದರೆ ಅಲ್ಲಿಯೂ ಏನಾದರೂ ದೇವಾಲಯದ ಕುರುಹುಗಳು ಸಿಕ್ಕರೆ ಒಡೆಯಲಾಗುತ್ತದೆಯೇ? ನಾವಿಲ್ಲಿ ನೂರಾರು ವರ್ಷಗಳಿಂದ ನಮಾಜ್ ಮಾಡುತ್ತಿದ್ದೇವೆ. ಇದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.