ಲಿಂಗಾಯತ ಪ್ರಾಬಲ್ಯದ ಕ್ಷೇತ್ರದಲ್ಲಿ ಯಡಿಯೂರಪ್ಪ ಅಬ್ಬರದ ಪ್ರಚಾರ

ಚಾಮರಾಜನಗರ: ಹನೂರು ಹಾಗೂ ಕೊಳ್ಳೇಗಾಲದಲ್ಲಿ ಅಮಿತ್ ಷಾ ಜೊತೆ ಜಂಟಿ ಪ್ರಚಾರದ ಬಳಿಕ ಗುಂಡ್ಲುಪೇಟೆ ಮತ್ತು ಚಾಮರಾಜನಗರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಂಟ್ರಿ ಕೊಟ್ಟು ಬಿಜೆಪಿ ಪರ ಮತಯಾಚಿಸಿದರು.
ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಎರಡು ಕ್ಷೇತ್ರಗಳಲ್ಲೂ ಲಿಂಗಾಯತರ ಪ್ರಾಬಲ್ಯ ಇರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪ್ರಚಾರ ಬಿಜೆಪಿಗೆ ಎನರ್ಜಿ ಕೊಟ್ಟಿದೆ ಎಂದರೆ ತಪ್ಪಾಗಲಾರದು.
ಗುಂಡ್ಲುಪೇಟೆ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿ, ಅವರು ಮನೆಗೆ ಹೋಗುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‍ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ದೇಶದ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದ್ದು, ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾಗೆ ರಾಹುಲ್ ಗಾಂಧಿ ಸಮನಲ್ಲ. ರಾಜ್ಯದಲ್ಲಿ ಮೋದಿ ಹಾಗೂ ಶಾ ನೇತೃತ್ವದಲ್ಲಿ ಬದಲಾವಣೆ ತರುವುದು ನಿಶ್ಚಿತ. ದೇಶಕ್ಕೆ ನೀವೇನು ಮಾಡಿದ್ದಿರಿ ಎಂದು ಕಾಂಗ್ರೆಸ್ ಕೇಳುತ್ತದೆ. ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿ ಅಪಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ. ಈ ಮೂಲಕ ದೇಶದ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಈ ಹಿಂದೆ ಹಣ, ಹೆಂಡ, ತೋಳಿನ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಕಾಂಗ್ರೆಸ್ ಗೆಲ್ಲುವ ಕಾಲವಿತ್ತು. ಆದರೆ ಇದೀಗ ಯುವಕರು ಜಾಗೃತರಾಗಿದ್ದು, ನಿಮ್ಮ ರಾಜಕೀಯ ದೊಂಬರಾಟ ನಡೆಯುವುದಿಲ್ಲ ಎಂದು ಛೇಡಿಸಿದರು.
ವರುಣಾದಲ್ಲಿ ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಜೊತೆಗೆ ಮತಯಾಚನೆ ಮಾಡಿದ್ದೇನೆ. ಈ ಮೂಲಕ ವಿ.ಸೋಮಣ್ಣ ವರುಣಾದಲ್ಲಿ 25-30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಅವರ ಪ್ರತಿ ಸ್ಪರ್ಧಿ ಸೋಲು ನಿಶ್ಚಿತ. ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆಮುಂದೆ ನೋಡುವ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದೆ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಓಡಾಡುತ್ತೆನೆ ಎಂದಿದ್ದೆ, ಅದರಂತೆ ಈಗ ಸಂಚಾರ ಮಾಡುತಿದ್ಧೇನೆ.
ಬಿಜೆಪಿ ಈಗಾಗಲೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ವಿಧವೆಯರ ಮಾಸಿಕ ಪಿಂಚಣಿ 800 ರೂ.ನಿಂದ 2 ಸಾವಿರಕ್ಕೆ ಹೆಚ್ಚಳ, ಹಬ್ಬಕ್ಕೆ ಮೂರು ಅಡುಗೆ ಅನಿಲ ಉಚಿತವಾಗಿ ವಿತರಣೆ, ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು, ಐದು ಕೆ.ಜಿ. ಸಿರಿಧಾನ್ಯ, ಹಾಲಿಗೆ
ಪ್ರೋತ್ಸಾಹ ಧನ ಹೆಚ್ಚಳ ಸೇರಿದಂತೆ ಇನ್ನಿತರ ಹಲವು ಯೋಜನೆಗಳನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದರು.
ಕೇತ್ರದಲ್ಲಿ ಸಿ.ಎಸ್.ನಿರಂಜನಕುಮಾರ್ ಅವರನ್ನು 20-25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರೆ ಮಾದರಿ ಕ್ಷೇತ್ರ ಮಾಡಲು ಏನು ಬೇಕು ಎಲ್ಲವನ್ನು ಕೊಡುತ್ತೇನೆ. ನಿರಂಜನ್ ಗೆಲ್ಲಿಸಿ ಬದಲಾವಣೆ ತಂದರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತದೆ. ಆದ್ದರಿಂದ ನಾಳೆಯಿಂದ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿ ಗೆಲ್ಲಿಸಿಕೊಂಡು ಬಂದರೆ 50 ಸಾವಿರ ಜನರ ಸೇರಿಸಿ ಮಾಡುವ ವಿಜಯೋತ್ಸವಕ್ಕೆ ನಾನು ಬರುತ್ತೇನೆ ಎಂದು ತಿಳಿಸಿದರು.
ಇನ್ನು, ಚಾಮರಾಜನಗರದಲ್ಲಿ ಸೋಮಣ್ಣ ಪರ ಮತಯಾಚಿಸಿ ಬಿಎಸ್ವೈ ಮಾತನಾಡಿ, ಸಚಿವ ವಿ.ಸೋಮಣ್ಣ ಅವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡಿ, ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಅಭಿವೃದ್ಧಿ ಸಾಧ್ಯ, ಕರ್ನಾಟಕ ನಂ1 ರಾಜ್ಯ ಆಗಲಿದೆ ಎಂದರು.ಎರಡೂ ಕಾರ್ಯಕ್ರಮಗಳಲ್ಲೂ ಬಿಜೆಪಿ ಕಾರ್ಯಕರ್ತರು ರಣೋತ್ಸಾಹದಿಂದ ಪಾಲ್ಗೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw