ಶ್ರೀಮಂತಿಗೆ ಮುಚ್ಚಿಡಬಹುದು, ಜಾತಿಗ್ರಸ್ಥ ಮನಸ್ಥಿತಿಯನ್ನಲ್ಲ: ಸುಧಾಮೂರ್ತಿ ದಂಪತಿ ನಡೆಗೆ ಬಿ.ಕೆ.ಹರಿಪ್ರಸಾದ್ ಕಿಡಿ

ಶ್ರೀಮಂತಿಕೆಯನ್ನು ಸರಳತೆಯಲ್ಲಿ ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ಮುಚ್ಚಿಡುವುದು ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರನ್ನು ಟೀಕಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಸ್ವಯಂ ದೃಢೀಕರಣ ಪತ್ರ ನೀಡಿದ್ದಾರೆ ಎನ್ನುವ ವರದಿಗೆ ಸಂಬಂಧಿಸಿದಂತೆ ಬಿ.ಕೆ.ಹರಿಪ್ರಸಾದ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ದೀನ ದಲಿತರ, ಹಿಂದುಳಿದವರ, ಬಡ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಪಡಸಿ, ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಮಾತ್ರ ಸಾಧ್ಯವೇ ಹೊರತು, ತೋರಣಿಕೆ, ಪ್ರಚಾರದ ಮೋಹದಿಂದ ಕೂಡಿದ ಸಮಾಜಸೇವೆಯಿಂದ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಸರ್ವ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಬಡವರ್ಗದವರ ಏಳಿಗೆಗಾಗಿ ಸರ್ಕಾರ ಸಮರ್ಪಕವಾದ ನೀತಿಗಳನ್ನು ರೂಪಿಸುವುದು ಸಾಂವಿಧಾನಿಕ ಜವಾಬ್ದಾರಿ. ಆದರೆ ಶ್ರೀಮಂತಿಕೆ, ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲಕ ಕಾರಣಗಳನ್ನು ನೀಡಿ ಸಾಮಾಜಿಕ ಸಮೀಕ್ಷೆಯಿಂದ ಹೊರಗುಳಿಯುವುದು ಅಷ್ಟೇ ಬೇಜವಾಬ್ದಾರಿ ಎಂದು ಹರಿಪ್ರಸಾದ್ ತರಾಟೆಗೆತ್ತಿಕೊಂಡಿದ್ದಾರೆ.
ಸಂಸ್ಥೆಗಳನ್ನು ಜಗದಗಲ ಬೆಳೆಸಲು ಜನರಿಂದ ಆಯ್ಕೆಯಾದ ಸರ್ಕಾರದಿಂದಲೇ ಭೂಮಿ, ನೀರು, ತೆರಿಗೆ, ವಿದ್ಯುತ್, ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆಯುವ ಸಂಸ್ಥೆಗಳ ಮಾಲೀಕರು ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಆತ್ಮಸಾಕ್ಷಿಗೆ ಬಗೆಯುವ ದ್ರೋಹ ಮಾತ್ರವಲ್ಲ ಉದ್ದಟತನದ ಪರಮಾವಧಿ. ಸರಳತೆ ಶ್ರೀಮಂತಿಕೆಯನ್ನ ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ಥ ಮನಸ್ಥಿತಿಯನ್ನಲ್ಲ…! ಎಂದು ತಿರುಗೇಟು ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD