ಸದನಕ್ಕೆ 9:15ಕ್ಕೆ ಬನ್ನಿ ಅಂತೀರಿ, ನೀವು ಬರೋದು 10:20ಕ್ಕೆ! ಸಭಾಧ್ಯಕ್ಷರ ವಿರುದ್ಧ ಶಾಸಕ ಎಸ್. ಸುರೇಶ್ ಕುಮಾರ್ ಗರಂ
ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನದ ವೇಳೆ ಸದನ ತಡವಾಗಿ ಆರಂಭವಾಗುತ್ತಿರುವ ಬಗ್ಗೆ ಬಿಜೆಪಿಯ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸಭಾಧ್ಯಕ್ಷ ಯು.ಟಿ. ಖಾದರ್ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಎದ್ದು ನಿಂತ ಸುರೇಶ್ ಕುಮಾರ್ ಅವರು ಕಲಾಪದ ವಿಳಂಬದ ಬಗ್ಗೆ ಸಭಾಧ್ಯಕ್ಷರ ಗಮನ ಸೆಳೆದರು. “ಸಭಾಧ್ಯಕ್ಷರೇ, ನಿಮ್ಮ ಕಚೇರಿಯಿಂದ ನಮಗೆ 9:15ಕ್ಕೆ ಸದನದಲ್ಲಿ ಹಾಜರಿರಬೇಕೆಂದು ಸೂಚನೆ ಬರುತ್ತದೆ. ಅದರಂತೆ ನಾವು ಶಿಸ್ತಿನಿಂದ ಸಮಯಕ್ಕೆ ಸರಿಯಾಗಿ ಬರುತ್ತೇವೆ. ಆದರೆ ಸದನಕ್ಕೆ ಬಂದು ನೋಡಿದರೆ ಇಡೀ ಹಾಲ್ ಖಾಲಿ ಖಾಲಿ ಇರುತ್ತದೆ. ನೀವು ಕಲಾಪ ಆರಂಭಿಸಿದ್ದು 10:20ಕ್ಕೆ. ಇದೇನು ಶಿಸ್ತು?” ಎಂದು ಪ್ರಶ್ನಿಸಿದರು.
ಸಮಯದ ಪಾಲನೆ ಆಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, “ನೀವು ಮನೆಯಿಂದ ಹೊರಡುವಾಗ ಅಥವಾ ಸದನಕ್ಕೆ ಬರುವಾಗ ಕನಿಷ್ಠ ನನಗೊಂದು ಫೋನ್ ಮಾಡಿ ತಿಳಿಸಿ, ಆಗ ನಾವು ಕೂಡ ಇಲ್ಲಿಗೆ ಬರುತ್ತೇವೆ. ಸುಮ್ಮನೆ ಬಂದು ಕಾಯುವುದು ಬೇಡವಲ್ಲವೇ?” ಎಂದು ಮಾರ್ಮಿಕವಾಗಿ ನುಡಿದರು.
ಸಭಾಧ್ಯಕ್ಷ ಯು.ಟಿ. ಖಾದರ್ ಉತ್ತರ:
ಶಾಸಕರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, “ನಾನು ಸಮಯಕ್ಕೆ ಸರಿಯಾಗಿಯೇ ಇರುತ್ತೇನೆ. ಹಿಂದೆಲ್ಲಾ 12 ಗಂಟೆಗೆ ಕಲಾಪ ಆರಂಭವಾಗುತ್ತಿತ್ತು. ಶಾಸಕರು ಬೇಗ ಬರಲಿ ಎಂಬ ಉದ್ದೇಶದಿಂದ ನಾನು ಸಮಯವನ್ನು ಮುಂಚಿತವಾಗಿ ನಿಗದಿಪಡಿಸಿದ್ದೇನೆ. ನೀವು ನಾಲ್ಕೈದು ಜನ ಶಾಸಕರು ಅತ್ಯಂತ ಶಿಸ್ತಿನಿಂದ ಬೇಗ ಬರುತ್ತೀರಿ, ನಿಮಗೆ ನನ್ನ ಅಭಿನಂದನೆಗಳು. ಉಳಿದ ಶಾಸಕರಿಗೂ ನೀವು ಮಾದರಿಯಾಗಬೇಕು,” ಎಂದು ಸಮಜಾಯಿಷಿ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























