ಆಸ್ಪತ್ರೆ ಬೇಡ, ಮಂತ್ರವಾದಿ ಸಾಕು: ಮನೆಯವರ ಮೌಢ್ಯದಿಂದ ಸಂಕಷ್ಟಕ್ಕೆ ಸಿಲುಕಿದ ಕ್ಯಾನ್ಸರ್ ಪೀಡಿತ ಯುವತಿ

ಮೈಸೂರು: ಮನೆಯವರ ಮೌಢ್ಯಕ್ಕೆ ಯುವತಿಯೋರ್ವಳು ತುತ್ತಾದ ಘಟನೆ ಮೈಸೂರು ಜಿಲ್ಲೆಯ ಚನ್ನರಾಯಪಟ್ಟಣದ ಮಾದೇಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಮಮತಾಶ್ರೀ(26) ತನ್ನ ತಮ್ಮ ಹಾಗೂ ತಾಯಿಯ ಮೌಢ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಯುವತಿಯಾಗಿದ್ದಾಳೆ. ಮಮತಾ ಡಿಗ್ರಿ ಮುಗಿಸಿದ್ದಳು, ನಾಲ್ಕು ತಿಂಗಳ ಹಿಂದೆ ಆಕೆಗೆ ಬೆನ್ನು ನೋವು ಕಾಣಿಸಿಕೊಂಡಿತ್ತು.
ಇತ್ತ ಮೌಢ್ಯಾಚರಣೆಯ ವಿಶ್ವಾಸಿಯಾಗಿದ್ದ ಮಮತಾಳ ತಮ್ಮ ಆಸ್ಪತ್ರೆಗೆ ದಾಖಲಿಸುವುದು ಬೇಡ ಎಂದು ಪಟ್ಟು ಹಿಡಿದು ಮಂತ್ರವಾದಿಯ ಬಳಿಗೆ ಆಕೆಯನ್ನ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಕಳೆದ ಮೂರು ತಿಂಗಳುಗಳಿಂದ ಮಂತ್ರವಾದಿಯ ಮಾತು ಕೇಳಿ ತನ್ನ ಅಕ್ಕನನ್ನು ಗೃಹ ಬಂಧನದಲ್ಲಿಟ್ಟು, ಸರಿಯಾಗಿ ಊಟ ನೀಡದೇ, ಅರಿಶಿನ ನೀರು, ನಿಂಬೆ ಹಣ್ಣು ರಸ ಕುಡಿಸಿದ್ದಾನೆ. ಇದರಿಂದಾಗಿ ಮಮತಾ ತೀವ್ರವಾಗಿ ಅಸ್ವಸ್ಥಳಾಗಿದ್ದು, ಈ ಸಂದರ್ಭದಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಮಮತಾ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದು ಬಂದಿದೆ. ನಾಲ್ಕು ತಿಂಗಳ ಹಿಂದೆಯೇ ಆಕೆಗೆ ಚಿಕಿತ್ಸೆ ನೀಡಿದ್ದರೆ, ಈಗ ಕ್ಯಾನ್ಸರ್ ನಿವಾರಣೆ ಹಂತಕ್ಕೆ ಬರುತ್ತಿತ್ತು. ಆದ್ರೆ, ಮಂತ್ರವಾದಿಯ ಮಾತು ಕೇಳಿ ಯುವತಿಯ ತಮ್ಮ ಹಾಗೂ ತಾಯಿ ಯುವತಿಯ ಜೀವಕ್ಕೆ ಅಪಾಯ ತರುವ ಹಂತಕ್ಕೆ ತಂದಿದ್ದಾರೆನ್ನಲಾಗಿದೆ.
ಮಂತ್ರವಾದಿಗಳನ್ನು ನಂಬಿ ಸಾಕಷ್ಟು ಜನರು ಇಂತಹ ಯಡವಟ್ಟುಗಳನ್ನು ಮಾಡುತ್ತಲೇ ಇದ್ದಾರೆ. ಮೌಢ್ಯಾಚರಣೆಯಲ್ಲಿ ತೊಡಗಿದವರು ತಮಗೆ ಮಾತ್ರವಲ್ಲ, ತಮ್ಮವರಿಗೂ ಸಂಕಷ್ಟ ತಂದಿಡುತ್ತಾರೆ ಎನ್ನುವುದಕ್ಕೆ ಇದೇ ಸ್ಪಷ್ಟ ನಿದರ್ಶನ. ನಂಬಿಕೆಗಳು ಏನೇ ಇರಲಿ, ಆದರೆ ಅನಾರೋಗ್ಯಗಳು ಕಾಣಿಸಿಕೊಂಡಾಗ ಮಂತ್ರವಾದಿಗಳನ್ನು ನಂಬದೇ ವೈದ್ಯರ ಬಳಿಗೆ ತಪ್ಪದೇ ಹೋಗಿ ಪರೀಕ್ಷಿಸಿ. ಆಧುನಿಕ ಜಗತ್ತಿನಲ್ಲಿ ಬದುಕಿದರೆ ಸಾಲದು ಆಧುನಿಕ ಯೋಚನೆಗಳೂ ಇರಬೇಕಲ್ಲವೇ? ತಂತ್ರಜ್ಞಾನಗಳ ಕ್ರಾಂತಿಯ ಕಾಲದಲ್ಲೂ ಇನ್ನೂ ಮಂತ್ರವಾದಗಳು ಎನ್ನುವ ಸುಳ್ಳು ಮೌಢ್ಯಗಳನ್ನು ನಂಬುತ್ತಿರುವುದು ದುರಾದೃಷ್ಟಕರ ಅಲ್ಲವೇ?