ರೆಂಜಾಳದಲ್ಲಿ ಹುಲಿಯ ದಾಳಿಗೆ 2 ದನಗಳು ಬಲಿ: ಗಾಢ ನಿದ್ರೆಯಲ್ಲಿರುವ ಅರಣ್ಯ ಇಲಾಖೆ - Mahanayaka

ರೆಂಜಾಳದಲ್ಲಿ ಹುಲಿಯ ದಾಳಿಗೆ 2 ದನಗಳು ಬಲಿ: ಗಾಢ ನಿದ್ರೆಯಲ್ಲಿರುವ ಅರಣ್ಯ ಇಲಾಖೆ

renjala
02/03/2024

ಕಾರ್ಕಳ: ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹುಲಿಗಳ ಸಂಚಾರ ನಿರಂತರವಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯವಹಿಸಿದ್ದಾರೆ. ಈ ನಡುವೆ ಎರಡು ದನಗಳನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೋಕಯ್ಯ ಎಂಬವರು ನಾಲ್ಕು ದನಗಳನ್ನು ಮೇಯಲು ಬಿಟ್ಟಿದ್ದರು. ಆದರೆ ದನಗಳು ಮನೆಗೆ ಬಾರದ ಕಾರಣ ಅವುಗಳನ್ನು ಹುಡುಕಿಕೊಂಡು ಹೋದಾಗ ಎರಡು ದನಗಳನ್ನು ಹುಲಿ ಕೊಂದು ಹಾಕಿರುವುದು ಪತ್ತೆಯಾಗಿದೆ.

8 ತಿಂಗಳ ಗರ್ಭಾವಸ್ಥೆಯಲ್ಲಿರುವ ಒಂದು ದನದ ಕೆಚ್ಚಲನ್ನು ಹುಲಿ ಸಂಪೂರ್ಣವಾಗಿ ತಿಂದು ಹಾಕಿದೆ, ಇನ್ನೊಂದು ದನವನ್ನು ಕೊಂದು ಹಾಕಿದೆ.

ಬೀರ್ ಮೇಲ್ ಪಾಲಾಜೆ ಎಂಬ ಪರಿಸರದಲ್ಲಿ ಈ ಘಟನೆ ನಡೆದಿದ್ದು, 2 ಹುಲಿಗಳನ್ನು ಲೋಕಯ್ಯನವರು ಪ್ರತ್ಯಕ್ಷವಾಗಿ ಕಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಗಾಢ ನಿದ್ರೆಯಲ್ಲಿರುವ ಅರಣ್ಯ ಇಲಾಖೆ:

ರೆಂಜಾಳ ಭಾಗದಲ್ಲಿ ಹುಲಿಗಳ ಸಂಚಾರದ ಬಗ್ಗೆ ಮಹಾನಾಯಕ ಮಾಧ್ಯಮದಲ್ಲಿ ಹಲವು ಬಾರಿ ವರದಿಗಳನ್ನು ಪ್ರಕಟಿಸಿದ್ದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ, ಇದೀಗ ಈ ಭಾಗದಲ್ಲಿ ಎರಡು ದನಗಳನ್ನು ಹುಲಿ ಕೊಂದು ಹಾಕಿದೆ. ಅರಣ್ಯ ಇಲಾಖೆ ಈ ಮೊದಲೇ ಎಚ್ಚೆತ್ತುಕೊಂಡಿದ್ದರೆ ಇಂತಹದ್ದೊಂದು ಘಟನೆಯೇ ನಡೆಯುತ್ತಿರಲಿಲ್ಲ.

ಈಗ, ಎದುರಿಗೆ ಸಿಕ್ಕಿದ ದನಗಳನ್ನು ಹುಲಿ ಕೊಂದು ಹಾಕಿದೆ. ಮುಂದೆ, ಜನರು  ಎದುರು ಸಿಕ್ಕಿದರೂ ಹುಲಿ ಅವರ ಪ್ರಾಣ ತೆಗೆಯುವುದಿಲ್ಲವೇ? ಎನ್ನುವ ಪ್ರಶ್ನೆಗಳು ಕೂಡ ಈ ಪ್ರದೇಶದಲ್ಲಿ ವ್ಯಾಪಕವಾಗಿ ಕೇಳಿ ಬಂದಿದೆ.  ಈ ಪ್ರದೇಶದಲ್ಲಿ ಸಣ್ಣ ಮಕ್ಕಳಿಂದ ಹಿರಿಯವರೆಗೂ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರ ಜೀವಗಳಿಗೂ ಇಲ್ಲಿ ಗ್ಯಾರೆಂಟಿ ಇಲ್ಲದಂತಾಗಿದೆ. ಅರಣ್ಯ ಇಲಾಖೆ ಅನ್ನೋದು ಇಲ್ಲಿ ಜೀವಂತವಾಗಿದೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಬೀದಿದೀಪ ಹಾಕಿಸಲೂ ಮುಂದಾಗದ ಪಂಚಾಯತ್:

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗುಡ್ಡೆ, ಗೋಳಿದಡಿ, ಕಕ್ಕೆರೆಗುಡ್ಡ ಹಾಗೂ ಹಾರಿಹಿತ್ಲು ವ್ಯಾಪ್ತಿಯ ಸಾರ್ವಜನಿಕರ ದಿನನಿತ್ಯದ ಪಾಡು ಇದಾಗಿದೆ. ಈ ಭಾಗದಲ್ಲಿ ಹುಲಿಗಳ ಘರ್ಜನೆ ಕೇಳಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದರು.  ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ  ಇಲ್ಲಿರೋದು ಚಿರತೆ ಅಂತ ಹೇಳುತ್ತಿದ್ದಾರಂತೆ! ಆದರೂ ಹುಲಿಯನ್ನು ಸೆರೆ ಹಿಡಿಯಲು ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ. ಈ ನಡುವೆ  ಈ ಪ್ರದೇಶದಲ್ಲಿ ಒಂದು ಬೀದಿ ದೀಪ ಅಳವಡಿಸಲು ಕೂಡ ಇಲ್ಲಿನ ಪಂಚಾಯತ್ ಮುಂದಾಗಿಲ್ಲ. ದೇವರಗುಡ್ಡೆ ಮಾರ್ಗವು ಬಜಗೋಳಿ, ಮಿಯ್ಯಾರು ರಾಷ್ಟ್ರಿಯ ಹೆದ್ದಾರಿಯನ್ನು ಸಂಪರ್ಕಿಸುವ ಒಳ ರಸ್ತೆಯಾಗಿದೆ. ತೀರಾ ಹಳ್ಳಿ ಪ್ರದೇಶವಾಗಿರುವ ಈ ಭಾಗದಲ್ಲಿ ಸ್ಥಿತಿವಂತರ ಮನೆಗಳ ಮುಂದೆ ಮಾತ್ರವೇ ಬೀದಿ ದೀಪ ಅಳವಡಿಸಲಾಗಿದೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.

ಹುಲಿಗಳ ಭಯದಿಂದ ಈ ಭಾಗದಲ್ಲಿ ರಾತ್ರಿ ವೇಳೆ ಸಂಚರಿಸಲು ಜನರು ಆತಂಕಪಡುತ್ತಿದ್ದಾರೆ. ಒಂದೆಡೆ ಗ್ರಾಮ ಪಂಚಾಯತ್ ಮತ್ತೊಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ನಿಷ್ಕ್ರಿಯವಾಗಿದ್ದು, ಹೀಗಾಗಿ ಜನರ ಸಮಸ್ಯೆಗಳನ್ನು ಕೇಳುವವರು ಯಾರು ಎನ್ನುವ ಪ್ರಶ್ನೆಗಳು ಮೂಡಿದೆ.

ಒಟ್ಟಿನಲ್ಲಿ ಹುಲಿಯೋ ಚಿರತೆಯೋ ಯಾವುದೇ ಆಗಿರಲಿ, ಅರಣ್ಯಾಧಿಕಾರಿಗಳು ತಕ್ಷಣವೇ ಹುಲಿಯನ್ನು ಸೆರೆಹಿಡಿಯಲು ಮುಂದಾಗಬೇಕಿದೆ. ಕ್ರಮಕೈಗೊಳ್ಳಲು ಜನರ ಪ್ರಾಣ ಬಲಿಯಾಗುವವರೆಗೂ ಕಾಯುವ ಬದಲು ತಕ್ಷಣವೇ ಇಲ್ಲಿರುವ ಹುಲಿಯನ್ನು ಬೇರೆಡೆಗೆ ಸ್ಥಳಾಂತರಿಸಿ, ಜನರು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ