ಇಬ್ಬರು ದಲಿತ ಬಾಲಕಿಯರ ಮೃತದೇಹ ಕೊಳದಲ್ಲಿ ಪತ್ತೆ | ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಶಂಕೆ
17/11/2020
ಪತೇಪುರ: ಇಬ್ಬರು ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯರನ್ನು ಹತ್ಯೆ ಮಾಡಿ ಕೊಳಕ್ಕೆ ಎಸೆದಿರುವ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶ ಫತೇಪುರ ಜಿಲ್ಲೆಯ ಅಸೋತರ್ ನಲ್ಲಿ ನಡೆದಿದೆ.
ಗ್ರಾಮದ ದಿಲೀಪ್ ಧೋಬಿ ಅವರ ಪುತ್ರಿಯರಾದ ಸುಮಿ (12) ಮತ್ತು ಕಿರಣ್ (8) ಹತ್ಯೆಗೀಡಾದ ಬಾಲಕಿಯರಾಗಿದ್ದಾರೆ. ಬಾಲಕಿಯರನ್ನು ಅತ್ಯಾಚಾರಕ್ಕೆ ಯತ್ನಿಸಲಾಗಿದ್ದು, ಬಳಿಕ ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತರಕಾರಿ ತರಲೆಂದು ತೋಟಕ್ಕೆ ಹೊರಟಿದ್ದ ಬಾಲಕಿಯರು ವಾಪಸ್ ಬಂದಿರಲಿಲ್ಲ. ಸಂಜೆಯ ವೇಳೆಗೆ ಇಬ್ಬರು ಬಾಲಕಿಯರ ಮೃತದೇಹ ಕೊಳದಲ್ಲಿ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಮೇಲೆತ್ತಲಾಗಿದೆ ಎಂದು ಎಎಸ್ಪಿ ರಾಜೇಶ್ ಕುಮಾರ್ ಘಟನೆಯ ಬಗ್ಗೆ ವಿವರಿಸಿದ್ದಾರೆ. ಸದ್ಯ ಬಾಲಕಿಯರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.


























