ಇಥಿಯೋಪಿಯಾದಲ್ಲಿ ಭೂಕುಸಿತ: 229 ಮಂದಿ ಸಾವು; ಹಲವಾರು ಮಂದಿ ನಾಪತ್ತೆ
ಇಥಿಯೋಪಿಯಾದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ ಕನಿಷ್ಠ 229 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬದುಕುಳಿದವರನ್ನು ರಕ್ಷಿಸಲು ಪ್ರಯತ್ನಿಸಿದ ಅನೇಕರು ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಇಥಿಯೋಪಿಯಾದ ಕೆಂಚೊ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಬಲಿಯಾದವರಲ್ಲಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಸೇರಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿ ದಗ್ಮಾವಿ ಅಯೆಲೆ ಹೇಳಿದ್ದಾರೆ.
ಸಾವಿನ ಸಂಖ್ಯೆ ಸೋಮವಾರ ತಡರಾತ್ರಿ ತೀವ್ರವಾಗಿ ಏರಿದೆ. ಭೂಕುಸಿತ ಸಂಭವಿಸಿದ ಆಡಳಿತಾತ್ಮಕ ಪ್ರದೇಶವಾದ ಗೋಫಾ ವಲಯದ ಸಂವಹನ ಕಚೇರಿಯ ಮುಖ್ಯಸ್ಥ ಕಸ್ಸಾಹುನ್ ಅಬೈನೆಹ್ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇಥಿಯೋಪಿಯಾದ ಆಡಳಿತ ಪಕ್ಷವು ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಪ್ರಧಾನಿ ಅಬಿ ಅಹ್ಮದ್ ಅವರು ಫೇಸ್‌ಬುಕ್ ಹೇಳಿಕೆಯಲ್ಲಿ,” ಈ ಭೀಕರ ನಷ್ಟದಿಂದ ತೀವ್ರ ದುಃಖಿತನಾಗಿದ್ದೇನೆ” ಎಂದಿದ್ದಾರೆ.
ಶೋಧ ಮತ್ತು ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು ಫೆಡರಲ್ ವಿಪತ್ತು ತಡೆಗಟ್ಟುವ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ ಎಂದು ಪ್ರಧಾನಿಯವರ ಹೇಳಿಕೆ ತಿಳಿಸಿದೆ. ಗೋಫಾ ವಲಯದ ವಿಪತ್ತು ಪ್ರತಿಕ್ರಿಯೆ ಏಜೆನ್ಸಿಯ ನಿರ್ದೇಶಕ ಮಾರ್ಕೋಸ್ ಮೆಲೆಸ್, ಅನೇಕ ರಕ್ಷಕರು ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ. ತಾಯಿ, ತಂದೆ, ಸಹೋದರ ಮತ್ತು ಸಹೋದರಿ ಸೇರಿದಂತೆ ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡ ಮಕ್ಕಳು ಶವಗಳನ್ನು ತಬ್ಬಿಕೊಳ್ಳುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth