ಅವಘಡ: ಕೇರಳದಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಕಾಲ್ತುಳಿತ: ನಾಲ್ವರು ಕಾಲೇಜು ವಿದ್ಯಾರ್ಥಿಗಳ ಸಾವು; 60 ಮಂದಿಗೆ ಗಾಯ

ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಕುಸಾಟ್) ವಿಶ್ವವಿದ್ಯಾಲಯದ ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ತೆರೆದ ಸಭಾಂಗಣದಲ್ಲಿ ನಡೆದ ನಿಖಿತಾ ಗಾಂಧಿ ಅವರ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಈ ದುರಂತ ಘಟನೆ ಸಂಭವಿಸಿದೆ. ಗಾಯಾಳಿಗಳಿಗೆ ಚಿಕಿತ್ಸೆ ನೀಡಲು ಕಲಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ಕುಸಾಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶಂಕರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಂಗೀತ ಕಾರ್ಯಕ್ರಮ ಟೆಕ್ ಫೆಸ್ಟ್ ನ ಭಾಗವಾಗಿತ್ತು. 2000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮಳೆ ಪರಿಸ್ಥಿತಿಯಿಂದಾಗಿ ಕೆಲವು ವಿದ್ಯಾರ್ಥಿಗಳು ಮೆಟ್ಟಿಲುಗಳ ಮೇಲೆ ಜಾರಿ ಕಾಲ್ತುಳಿತ ಘಟನೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್.ಅಜಿತ್ ಕುಮಾರ್, “ಅನಿರೀಕ್ಷಿತ ಮಳೆಯಿಂದಾಗಿ ಸ್ಥಳದಲ್ಲಿದ್ದವರು ಆಶ್ರಯ ಪಡೆಯಲು ಓಡಿ ಹೋದ ಪರಿಣಾಮ ಮೆಟ್ಟಿಲುಗಳ ಮೇಲಿದ್ದ ವ್ಯಕ್ತಿಗಳು ಜಾರಿ ಬಿದ್ದು ಕಾಲ್ತುಳಿತ ಉಂಟಾಯಿತು” ಎಂದು ಪ್ರತಿಕ್ರಿಯಿಸಿದ್ದಾರೆ.